ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರತಿಯೊಬ್ಬ ವಿದ್ಯಾರ್ಥಿಯ ಸುಂದರ ಬದುಕು ನಿರ್ಮಿಸುವಾತ ಗುರು. ವಿದ್ಯಾರ್ಥಿ ಜೀವನಕ್ಕೆ ರೂಪ ಕೊಟ್ಟ ಗುರುವನ್ನು ಎಂದೂ ಮರೆಯದಿರಿ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಶಿಕ್ಷಣ ಸಮಿತಿಯ ಎಸ್ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2002-03ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಂದು ಕಾರ್ಯಕ್ಕೂ ಗುರು ಬೇಕು. ಅದರಂತೆ ವಿದ್ಯಾರ್ಥಿ ಜೀವನಕ್ಕೆ ಗುರು ತುಂಬಾ ಅವಶ್ಯವಾಗಿದ್ದು, ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಸನ್ಮಾರ್ಗ ಪ್ರಾಪ್ತಿಯಾಗುವುದರ ಜೊತೆಯಲ್ಲಿ ಸಮಾಜವೂ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುವುದು. ವಿದ್ಯಾರ್ಥಿಗಳು ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದಾಗ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ವಿದ್ಯಾರ್ಥಿ ಮಹೇಶ ಶಿರಹಟ್ಟಿ ಮಾತನಾಡಿ, 23 ವರ್ಷಗಳ ಹಿಂದೆ ನಾವು ಒಂದು ಮಣ್ಣಿನ ಮುದ್ದೆಯಂತಿದ್ದೆವು. ನಮಗೆ ರೂಪ ಕೊಟ್ಟು ಮೂರ್ತಿಯನ್ನಾಗಿ ರೂಪಿಸಿದವರು ಗುರುಗಳು. ಅವರ ಋಣವನ್ನು ಎಂದಿಗೂ ತೀರಿಸಲಾಗದು ಎಂದರು.
ಕಲಿಸಿದ ಗುರುಗಳನ್ನು ಬಾಲಲೀಲಾ ಮಹಾಂತ ಶಿವಯೋಗಿ ಗವಿಮಠದಿಂದ ಬಾಲಲೀಲಾ ಮಹಾಂತ ಶಿವಯೋಗಿ ಕಲಾ ಭವನದವರೆಗೂ ವಿಶೇಷವಾಗಿ ಹೂವಿನ ಸುರಿಮಳೆಯೊಂದಿಗೆ ಗೌರವದಿಂದ ಬರಮಾಡಿಕೊಂಡರು. ಕಲಿಸಿದ ಗುರುಗಳನ್ನು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರನ್ನು ಸನ್ಮಾನಿಸಲಾಯಿತು.
ಸಾನ್ನಿಧ್ಯವನ್ನು ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಎಂ.ಡಿ. ಬಟ್ಟೂರ ವಹಿಸಿದ್ದರು. ಶಿಕ್ಷಣ ಪ್ರೇಮಿಗಳಾದ ಗೌರಮ್ಮ ಬಡ್ನಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಎಸ್.ಸಿ. ಚವಡಿ, ಬಿ.ಸಿ. ಬಡ್ನಿ, ಎಂ.ಎಂ. ಅದರಗುಂಚಿ, ಎಫ್.ಎಸ್. ಅಮೋಘಿಮಠ, ಎಸ್.ಸಿ. ಕುರ್ತಕೋಟಿ, ವಿಜಯ ನೀಲಗುಂದ, ಕಾಲೇಜಿನ ಪ್ರಾಚಾರ್ಯ ಎ.ಎಂ. ಅಂಗಡಿ, ಮುಖ್ಯೋಪಾಧ್ಯಾಯ ಇ.ಎಂ. ಗುಳೇದಗುಡ್ಡ, ಬಿ.ಜಿ. ಯಳವತ್ತಿ, ವಾಯ್.ಎಚ್. ಚಲವಾದಿ, ಚಂದ್ರಶೇಖರ ಎಸ್, ಎಸ್.ಎಫ್. ಮುದ್ದಿನಗೌಡ್ರ, ಆರ್.ಆರ್. ಪಟ್ಟಣ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಇದ್ದರು.
ಅಧ್ಯಕ್ಷತೆ ವಹಿಸಿದ್ದ ಎಂ.ಡಿ. ಬಟ್ಟೂರ ಮಾತನಾಡಿ, ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಹಾದಿಯಲ್ಲಿ ಸಾಗಲು ಪ್ರತಿಯೊಬ್ಬ ವಿದ್ಯಾರ್ಥಿಗೆ ಗುರುವಿನ ಮಾರ್ಗದರ್ಶನ ಬೇಕು. ವಿದ್ಯಾರ್ಥಿ ಜೀವನ ಬಂಗಾರದ ಜೀವನವಾಗಲು ಗುರುವಿನ ಅನುಗ್ರಹ ಇರಬೇಕು ಎಂದರು.



