ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಆಧುನಿಕ ಜೀವನಶೈಲಿ ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳ ನಡುವೆ ಮನುಷ್ಯನ ಬದುಕು ಒತ್ತಡಮಯವಾಗಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್ ಹೇಳಿದರು.
ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶ್ರೀದೇವಿ ಪ್ರಸಾದ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 10 ದಿನಗಳ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವು ಭಾರತದ ಪುರಾತನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದ್ದು, ಇಂದು ವಿಶ್ವದಾದ್ಯಂತ ಸ್ವೀಕಾರಾರ್ಹತೆ ಪಡೆದುಕೊಂಡಿದೆ. ನಿಯಮಿತ ಯೋಗಾಭ್ಯಾಸದಿಂದ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪಿಎಸ್‌ಐ ಚಂದ್ರಶೇಖರ್ ಮಾತನಾಡಿ, ಯೋಗವು ಯಾವುದೇ ನಿರ್ದಿಷ್ಟ ವಯೋಮಿತಿಗೆ ಸೀಮಿತವಾಗಿಲ್ಲ. ಒತ್ತಡ ಮತ್ತು ಆತಂಕಗಳಿಂದ ಕೂಡಿದ ಇಂದಿನ ಬದುಕಿನಲ್ಲಿ ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಡಿಒ ಚಂದ್ರಶೇಖರ್, ಕಾಲೇಜು ಪ್ರಾಂಶುಪಾಲ ಬಸವರಾಜ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೊಟ್ರೇಶ್, ಬಿಡಿಸಿಸಿ ಬ್ಯಾಂಕ್ ಸದಸ್ಯ ವೈ. ಸುರೇಶ, ಎಣ್ಣೆಕಾಳು ಸೊಸೈಟಿ ಅಧ್ಯಕ್ಷ ಸುಣಗಾರ ಪರಶುರಾಮ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಡಿ.ಎಂ. ಆನಂದ್, ಮುಖ್ಯ ಶಿಕ್ಷಕಿ ರಾಜೇಶ್ವರಿ, ಎಸ್‌ಡಿಎಂಸಿ ಅಧ್ಯಕ್ಷ ನೀಲಗಿರಿ, ಗ್ಯಾರಂಟಿ ಸಮಿತಿ ಸದಸ್ಯ ಜಿ. ಗಿರೀಶ, ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಒತ್ತಡ ಮತ್ತು ರೋಗಗಳಿಂದ ಮುಕ್ತ ಜೀವನ ನಡೆಸಲು ಯೋಗ ಅತ್ಯಗತ್ಯ. ಪ್ರತಿಯೊಬ್ಬರೂ ಯೋಗವನ್ನು ದಿನನಿತ್ಯದ ಬದುಕಿನ ಭಾಗವಾಗಿಸಿಕೊಳ್ಳಬೇಕು.”
– ಅಕ್ಕಿ ತೋಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ



