ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಖಲೀಲುಲ್ಲಾ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ, ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಸಿಪಿಐ(ಎಂ) ಹಾಗೂ ಸಿಐಟಿಯು ಮುಖಂಡರು ಆಗ್ರಹಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಉಪತಹಶೀಲ್ದಾರ್ ಕೆ. ಶಿವಕುಮಾರ ಗೌಡ ಅವರಿಗೆ ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಿಐಟಿಯು ಮುಖಂಡ ಆರ್.ಎಸ್. ಬಸವರಾಜ್, ವಿಜಯನಗರ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಠಾಣೆಯಲ್ಲಿ ಲಾಕಪ್ ಸಾವು ಸಂಭವಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸ ಕುಸಿದಿದ್ದು, ಅನ್ಯಾಯವಾದಾಗ ಠಾಣೆಗೆ ಹೋಗುವುದಕ್ಕೂ ಜನರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸಿಪಿಐ(ಎಂ) ಮುಖಂಡ ಜಗನ್ನಾಥ್ ಮಾತನಾಡಿ, ಕುಟುಂಬ ಕಲಹದ ಹಿನ್ನೆಲೆಯಲ್ಲಿ ಠಾಣೆಗೆ ಕರೆತರಲಾಗಿದ್ದ ಮೆಹಬೂಬ್ ನಗರದ ಕಟ್ಟಡ ಕಾರ್ಮಿಕ ಖಲೀಲುಲ್ಲಾ ಮೇಲೆ ಹಲ್ಲೆ ನಡೆಸಿದ ಪರಿಣಾಮವೇ ಅವರು ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದ್ದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಸತ್ಯಾಂಶ ಹೊರತರಬೇಕು ಎಂದು ಒತ್ತಾಯಿಸಿದರು.
ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ಇಲಾಖೆಯ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಖಲೀಲುಲ್ಲಾ ಸಾವಿನಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ₹50 ಲಕ್ಷ ಪರಿಹಾರ ನೀಡಿ ಕುಟುಂಬದ ಒಬ್ಬರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆ. ರಮೇಶ್, ಸರ್ದಾರ್ ಹುಲಿಗೆಮ್ಮ, ಕೆ. ಗಾಳೆಪ್ಪ, ಕೆ. ಬಸವರಾಜ, ರಂಗಪ್ಪ ದಾಸರ, ಪಿ. ಚಾಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು.
“ಅನ್ಯಾಯಕ್ಕೊಳಗಾದ ಜನರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಹೋಗುವುದೇ ತಪ್ಪಾ ಎಂಬ ಪ್ರಶ್ನೆ ಇಂದು ಸಾರ್ವಜನಿಕರನ್ನು ಕಾಡುತ್ತಿದೆ. ಖಲೀಲುಲ್ಲಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.”
– ಆರ್.ಎಸ್. ಬಸವರಾಜ್, ಸಿಐಟಿಯು ಮುಖಂಡ

