ರಾಯಚೂರು: ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಐಇಇ ಬಿ. ವಿಜಯಲಕ್ಷ್ಮಿಗೆ ಸೇರಿದ ಎರಡು ಮನೆ ಸೇರಿ ಐದು ಕಡೆಗಳಲ್ಲಿ ದಾಳಿ ಮಾಡಲಾಗಿದೆ.. ಸಿಂಧನೂರಿನಲ್ಲಿ ಎಐಇಇ ಆಗಿರುವ ವಿಜಯಲಕ್ಷ್ಮಿ ಮೇಲೆ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಐದು ತಂಡಗಳು ದಾಳಿ ನಡೆಸಿದವು.
ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯಲ್ಲಿನ ಮನೆ, ಗಂಗಾಪರಮೇಶ್ವರ ಲೇಔಟ್ನಲ್ಲಿನ ಮನೆ, ಯಾದಗಿರಿ, ಜೋಳದಹೆಡಗಿ ಹಾಗೂ ಸಿಂಧನೂರಿನಲ್ಲಿ ಆರ್ಡಬ್ಲ್ಯೂಎಸ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಒಟ್ಟು 49 ಸ್ಥಳಗಳಲ್ಲಿ ಬಿ. ವಿಜಯಲಕ್ಷ್ಮಿಗೆ ಸೇರಿದ ನಿವೇಶನಗಳು, ಮನೆ, ತೋಟದ ಮನೆ, ಜಮೀನು ದಾಖಲೆಗಳು ಹಾಗೂ ಚಿನ್ನಾಭರಣ ಪರಿಶೀಲನೆ ನಡೆಸಲಾಗಿದೆ. ಯಾದಗಿರಿಯಲ್ಲಿ ಲೇಔಟ್, ಜೋಳದಹೆಡಗಿಯಲ್ಲಿ ತೋಟದ ಮನೆ ಮತ್ತು ಚಂದ್ರಬಂಡಾ ರಾಷ್ಟ್ರೀಯ ಹೆದ್ದಾರಿ ಹತ್ತಿರ ಜಮೀನಿನ ಸ್ವತ್ತುಗಳನ್ನು ತಪಾಸಣೆ ಮಾಡಲಾಗಿದೆ. ದಾಳಿ ವೇಳೆ ವಿಜಯಲಕ್ಷ್ಮಿ ಅವರು ಸೊಸೆಯ ಹೆರಿಗೆ ನಿಮಿತ್ತ ಹುಬ್ಬಳ್ಳಿಯಲ್ಲಿದ್ದು, ಅಧಿಕಾರಿಗಳು ತಕ್ಷಣ ರಾಯಚೂರಿಗೆ ಬರುವಂತೆ ಸೂಚನೆ ನೀಡಿದ್ದಾರೆ.



