ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ತಾಪಮಾನ ಕಡಿಮೆಯಾದಾಗ ಸಹಜವಾಗಿಯೇ ಚಳಿಯಿಂದ ರಕ್ಷಣೆ ಪಡೆಯಲು ಹಲವರು ಮುಖದವರೆಗೆ ಕಂಬಳಿ ಅಥವಾ ಬೆಡ್ ಶಿಟ್ ಹೊದ್ದು ಮಲಗುತ್ತಾರೆ. ಇದು ದೇಹಕ್ಕೆ ಉಷ್ಣತೆಯನ್ನು ನೀಡುವ ಜೊತೆಗೆ ಆರಾಮದಾಯಕವಾಗಿಯೂ ಅನಿಸುತ್ತದೆ.
ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ, ರಾತ್ರಿ ನಿದ್ರಿಸುವ ವೇಳೆ ಮುಖ ಮುಚ್ಚಿಕೊಂಡು ಮಲಗುವ ಅಭ್ಯಾಸವು ಉಸಿರಾಟದ ವ್ಯವಸ್ಥೆಯ ಮೇಲೆ ಗಮನಾರ್ಹ ಒತ್ತಡವನ್ನು ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಅಭ್ಯಾಸದಿಂದ ಉಸಿರಾಟ ಹಾಗೂ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಮುಖ ಮುಚ್ಚಿಕೊಂಡು ಮಲಗುವುದರಿಂದ ಆಗುವ ಆರೋಗ್ಯ ಸಮಸ್ಯೆಗಳು
ನಿದ್ರಿಸುವ ಸಮಯದಲ್ಲಿ ಕಂಬಳಿ ಅಥವಾ ಬೆಡ್ ಶಿಟ್‌ನಿಂದ ಮುಖವನ್ನು ಮುಚ್ಚಿಕೊಂಡಾಗ, ನಾವು ಹೊರಹಾಕುವ ಕಾರ್ಬನ್ ಡೈಆಕ್ಸೈಡ್ ಗಾಳಿ ಹೊರಹೋಗಲು ಅವಕಾಶ ಸಿಗುವುದಿಲ್ಲ. ಇದರ ಪರಿಣಾಮವಾಗಿ ಆ ಗಾಳಿ ಅಲ್ಲಿಯೇ ಸಿಲುಕಿಕೊಂಡು, ನಾವು ಅರಿವಿಲ್ಲದೆಯೇ ಅದನ್ನೇ ಪುನಃ ಪುನಃ ಉಸಿರಾಡುತ್ತೇವೆ. ಇದರಿಂದ ದೇಹಕ್ಕೆ ತಲುಪುವ ತಾಜಾ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ.
ಇದರಿಂದ ಬೆಳಿಗ್ಗೆ ಎದ್ದಾಗ ತಲೆನೋವು ಕಾಣಿಸಿಕೊಳ್ಳುವುದು, ದಿನವಿಡೀ ದಣಿವಿನ ಅನುಭವ, ಏಕಾಗ್ರತೆಯ ಕೊರತೆ, ನಿದ್ರೆಯ ಮಧ್ಯೆ ಪದೇ ಪದೇ ಎಚ್ಚರಗೊಳ್ಳುವಂತಹ ಸಮಸ್ಯೆಗಳು ಉಂಟಾಗಬಹುದು.
ಇನ್ನೂ ಮುಖ ಮುಚ್ಚಿಕೊಂಡಿರುವ ಭಾಗದಲ್ಲಿ ತೇವಾಂಶ ಹಾಗೂ ಬೆವರು ಸಂಗ್ರಹವಾಗುತ್ತದೆ. ಕಂಬಳಿಯಲ್ಲಿರುವ ಧೂಳು ಮತ್ತು ಬ್ಯಾಕ್ಟೀರಿಯಾಗಳು ಚರ್ಮದ ಸಂಪರ್ಕಕ್ಕೆ ಬಂದು ಮೊಡವೆ, ಉರಿಯೂತ ಹಾಗೂ ಚರ್ಮದ ಅಲರ್ಜಿ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ ನಿದ್ರೆಯ ಸಮಯದಲ್ಲಿ ದೇಹದ ಉಷ್ಣತೆ ಹೆಚ್ಚಾಗುವುದರಿಂದ ಉತ್ತಮ ನಿದ್ರೆಗೆ ಅಡ್ಡಿಯಾಗುತ್ತದೆ.
ಯಾರಿಗೆ ಈ ಅಭ್ಯಾಸ ಹೆಚ್ಚು ಅಪಾಯಕಾರಿ?
-
ಅಸ್ತಮಾ ಸಮಸ್ಯೆ ಇರುವವರು
-
ಸೈನಸ್ ಅಥವಾ ಅಲರ್ಜಿ ಸಮಸ್ಯೆ ಇರುವವರು
-
ಚಿಕ್ಕ ಮಕ್ಕಳು ಮತ್ತು ಶಿಶುಗಳು
ಈ ವರ್ಗದವರಿಗೆ ಮುಖ ಮುಚ್ಚಿಕೊಂಡು ಮಲಗುವ ಅಭ್ಯಾಸ ಹೆಚ್ಚು ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮುನ್ನೆಚ್ಚರಿಕೆ ಮತ್ತು ಸುರಕ್ಷಿತ ಪರ್ಯಾಯಗಳು
-
ಕಂಬಳಿ ಅಥವಾ ಬೆಡ್ ಶಿಟ್ ಅನ್ನು ಭುಜದವರೆಗೆ ಮಾತ್ರ ಹೊದ್ದುಕೊಳ್ಳಿ
-
ಚಳಿಯಿಂದ ರಕ್ಷಣೆಗಾಗಿ ದಪ್ಪ ಬಟ್ಟೆ ಅಥವಾ ಸಾಕ್ಸ್ ಧರಿಸಿ
-
ಹತ್ತಿಯ ಹಾಸಿಗೆ ಮತ್ತು ಕಂಬಳಿಗಳನ್ನು ಬಳಸುವುದು ಉತ್ತಮ
-
ಬೆಳಕು ತಡೆಯಲು ಮುಖ ಮುಚ್ಚಿಕೊಳ್ಳುವ ಬದಲು ಐ ಮಾಸ್ಕ್ ಬಳಸಬಹುದು
-
ಪಾದಗಳ ಬಳಿ ಬಿಸಿ ನೀರಿನ ಬಾಟಲಿ ಇಡುವುದರಿಂದ ದೇಹದ ಉಷ್ಣತೆ ಕಾಪಾಡಬಹುದು



