ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆದರಳ್ಳಿ ಗ್ರಾಮದಲ್ಲಿ ಬೀಡಾಡಿ ದನ-ಕರುಗಳು ಹಾಗೂ ಹಂದಿಗಳಿಂದ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಇದರಿಂದ ಆದರಹಳ್ಳಿ ಗ್ರಾಮವನ್ನು ಮುಕ್ತಗೊಳಿಸಬೇಕು ಎಂದು ಅಲ್ಲಿನ ಕೆಲ ನಿವಾಸಿಗಳು ತಹಸೀಲ್ದಾರ ಧನಂಜಯ ಎಂ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗ್ರಾಮದ ನಿವಾಸಿಗಳು, ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ 4-5 ವರ್ಷಗಳಿಂದ ದನ-ಕರುಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಗ್ರಾಮದಲ್ಲಿ ನೂರಾರು ಹಂದಿಗಳನ್ನು ತಂದು ಬಿಟ್ಟು ಹೋಗಿದ್ದಾರೆ. ಇದರಿಂದ ಅನೇಕ ಅವಘಡಗಳು ಸಂಭವಿಸುತ್ತಿದ್ದು, ದನಕರುಗಳನ್ನು ಬೀದಿಗೆ ಬಿಡುವದರಿಂದ ಹೊಲದಲ್ಲಿ ಬೆಳೆಗಳು ಹಾಳಾಗುತ್ತಿದೆ. ಹಂದಿಗಳ ಕಾಟದಿಂದ ತಿಪ್ಪೆಗಳು ಹಾಗೂ ದನಕರುಗಳಿಗಾಗಿ ಸಂಗ್ರಹಿಸಿದ ಹೊಟ್ಟು, ಮೇವುಗಳ ಬಣವಿಗಳು ಹಾಳಾಗುತ್ತಿದೆ. ಈ ದನಕರುಗಳ ಮಾಲಕರಿಗೆ ಮತ್ತು ಹಂದಿ ಮಾಲಕರಿಗೆ ತಿಳಿಸಿ ಅವುಗಳನ್ನು ಬೇರೆಡೆ ಸಾಗಿಸುವಂತೆ ಕ್ರಮ ವಹಿಸಿ ಇವುಗಳ ಉಪಟಳವನ್ನು ತಡೆಯಬೇಕು ಎಂದು ವಿನಂತಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರರು ಅಗತ್ಯ ಕ್ರಮಗಳನ್ನು ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಿಪ್ಪಣ್ಣ ಲಮಾಣಿ, ಶಂಕರಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಮಂಜಪ್ಪ ಹೆಸರೂರ, ನೀಲಪ್ಪ ತಳವಾರ, ಮಹಾಂತಗೌಡ ಪಾಟೀಲ, ಮಮ್ಮಿಸಾಬ ವಾಲಿಕಾರ, ಚನ್ನಪ್ಪ ಲಮಾಣಿ, ಮಂಜುನಾಥ ರಾಹೂತ್, ಗುಡದಪ್ಪ ಅಂಬಿಗೇರ, ಮಲ್ಲಿಕಸಾಬ ವಾಲಿಕಾರ ಮುಂತಾದವರಿದ್ದರು.



