ಬೆಂಗಳೂರು: 30 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ (ACP) ಕೃಷ್ಣಮೂರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ರಾಜಧಾನಿಯಲ್ಲಿ ನಡೆದಿದೆ. ಮಲ್ಲೇಶ್ವರಂನಲ್ಲಿರುವ ಎಸಿಪಿ ಕಚೇರಿಯಲ್ಲೇ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ನಡೆಸಿ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಸಾಗರ್ ಹೋಟೆಲ್ ಮಾಲೀಕರಿಂದ ಪ್ರತೀ ತಿಂಗಳು 32 ಸಾವಿರ ರೂಪಾಯಿ ಲಂಚ ನೀಡುವಂತೆ ಎಸಿಪಿ ಕೃಷ್ಣಮೂರ್ತಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಹೋಟೆಲ್ ಮಾಲೀಕರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಟ್ರ್ಯಾಪ್ ಕಾರ್ಯಾ ಚರಣೆಗೆ ಮುಂದಾಗಿದ್ದರು. ಅದರಂತೆ ಬುಧವಾರ ಎಸಿಪಿ ಕಚೇರಿಯಲ್ಲಿ ಹೋಟೆಲ್ ಮಾಲೀಕರಿಂದ 30 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕೃಷ್ಣಮೂರ್ತಿ ರನ್ನು ವಶಕ್ಕೆ ಪಡೆದಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿರುವ ಎಸಿಪಿ ಕೃಷ್ಣಮೂರ್ತಿ ಅವರ ಆಡಿಯೋ ದಾಖಲೆಗಳೂ ಲಭ್ಯವಾಗಿದ್ದು, ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.



