ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಾಕನೂರು ಗ್ರಾಮದಲ್ಲಿರುವ ಎಸ್‌ಬಿಐ ಬ್ಯಾಂಕ್ ಲಾಕರ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ಪೊಲೀಸರು ಮಹಾರಾಷ್ಟ್ರ ಮೂಲದ ಅಕ್ಷಯ್ ಅಂಬೋರೆ ಮತ್ತು ಕುನಾಲ್ ಚವ್ಹಾಣ್ ಎಂಬ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ.
2025ರ ಸೆಪ್ಟೆಂಬರ್ 2ರಂದು ನಡೆದ ದರೋಡೆ ವೇಳೆ ಆರೋಪಿಗಳು ಸಿಸಿ ಕ್ಯಾಮರಾಗಳಿಗೆ ಸ್ಪ್ರೇ ಹೊಡೆದು, ಮೊಬೈಲ್ ಬಳಕೆ ಮಾಡದೆ, ಫಿಂಗರ್‌ಪ್ರಿಂಟ್ ಸಿಗದಂತೆ ಕಳವು ನಡೆಸಿದ್ದರು. ದರೋಡೆಗೆ ಆರು ತಿಂಗಳ ಹಿಂದೆಯೇ ಬ್ಯಾಂಕ್‌ಗೆ ಬಂದು ರೆಕ್ಕಿ ನಡೆಸಿದ್ದರೆಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬಂಧಿತರಿಂದ 25.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಹಣ, ಕಾರು, ಗ್ಯಾಸ್ ಕಟರ್, ಕಂಟ್ರಿಮೇಡ್ ಗನ್, ಎರಡು ಜೀವಂತ ಗುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಹಮ್ಮದ್ ನವಾನ್ ಮತ್ತು ಕಮರುಲ್ ಖಾನ್ ಎಂಬ ಇಬ್ಬರನ್ನು ಬಂಧಿಸಲಾಗಿತ್ತು.
ಒಟ್ಟು ನಾಲ್ವರು ಆರೋಪಿಗಳಿಂದ 62.20 ಲಕ್ಷ ರೂ. ಮೌಲ್ಯದ 472.20 ಗ್ರಾಂ ಚಿನ್ನಾಭರಣ ಹಾಗೂ ಹಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಜೈಲಿನಲ್ಲಿ ಪರಸ್ಪರ ಪರಿಚಿತರಾಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.



