ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ನಾಕಾದಲ್ಲಿ ಕಳೆದ ತಿಂಗಳು ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಸಮಗ್ರ ರೈತ ಸಂಘಟನೆಗಳು ಸುಮಾರು 18 ದಿನಗಳ ಕಾಲ ಹೋರಾಟ ನಡೆಸಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಮಾಡುವಲ್ಲಿ ಸಫಲವಾಗಿತ್ತು. ಇದರಿಂದ ಎಲ್ಲ ರೈತರಿಗೂ ಅನುಕೂಲವಾಗಿದ್ದು, ಹೋರಾಟಗಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಆದರೆ, ಇದೇ ಹೋರಾಟದ ವೇದಿಕೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳಿಗೆ ಅವಮಾನ ಮಾಡಿರುವುದನ್ನು ಡಿಎಸ್‌ಎಸ್ ಉಗ್ರವಾಗಿ ಖಂಡಿಸುತ್ತದೆ ಎಂದು ಮುಖಂಡರಾದ ಸುರೇಶ ನಂದೆಣ್ಣವರ, ತಾ.ಪಂ ಮಾಜಿ ಸದಸ್ಯ ಕೊಟ್ಟೆಪ್ಪ ವರ್ದಿ, ಗ್ರಾ.ಪಂ ಮಾಜಿ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ ತಿಳಿಸಿದರು.
ಅವರು ಗುರುವಾರ ಪತ್ರಿಕಾ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಆದರೆ ಹೋರಾಟ ವೇದಿಕೆಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಗಳನ್ನು ಅತಿಥಿಗಳು ಕೂಡುವ ಆಸನಗಳ ಹಿಂದೆ ಇಟ್ಟಿರುವುದು ಅವಮಾನದ ಸಂಗತಿಯಾಗಿದೆ. ಅಲ್ಲದೆ ವೇದಿಕೆಯಲ್ಲಿಯೇ ಮಹನೀಯರ ಭಾವಚಿತ್ರಕ್ಕೆ ಕುರ್ಚಿಯ ಮೇಲೆ ಕಾಲು ತೋರಿಸುತ್ತಾ ಕುಳಿತುಕೊಂಡಿದ್ದ ಜ್ಞಾನೋಬಾ ಬೋಮಲೆ ಮತ್ತು ಸಂಘಟಕರ ಮುಖ್ಯಸ್ಥ ಮಂಜುನಾಥ ಮಾಗಡಿ ಹಾಗೂ ಮತ್ತಿತರರ ಮೇಲೆ ದಲಿತ ಸಂಘಟನೆಗಳು ದೂರು ದಾಖಲಿಸಿದ್ದು, ಇಲ್ಲಿಯವರೆಗೂ ಯಾವುದೇ ಕ್ರಮಗಳಾಗಿಲ್ಲ ಎಂದು ಆರೋಪಿಸಿದರು.
ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನವೆಂಬರ್ 7ರಂದು ಅಸ್ಪೃಶ್ಯತಾ ಕಾಯ್ದೆ ಅನುಸಾರ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿತ್ತು. ಪೊಲೀಸರು ಕೇವಲ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಇದುವರೆಗೂ ಅವರನ್ನು ಬಂಧಿಸುವುದಾಗಲಿ, ಕಾನೂನು ಕ್ರಮ ಜರುಗಿಸುವುದಾಗಲಿ ಮಾಡಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ಸಹ ದೂರು ಸಲ್ಲಿಸಿದ್ದು ಅಲ್ಲಿಯೂ ಸಹ ಕ್ರಮವಾಗಿಲ್ಲ ಎಂದು ಆರೋಪಿಸಿದ ಅವರು, ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಇದನ್ನು ಡಿಎಸ್‌ಎಸ್ ಸಹಿಸುವುದಿಲ್ಲ. ಮುಂದಿನ 8 ದಿನದೊಳಗಾಗಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕಗಳು ಎಲ್ಲ ಗ್ರಾಮ ಪಂಚಾಯಿತಿ ಎದುರಿನಲ್ಲಿ ಯಾವುದೇ ಸೂಚನೆ ನೀಡದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಮಪ್ಪ ಗಡದವರ, ಫಕ್ಕೀರೇಶ ಭಜಕ್ಕನವರ, ಜಗದೀಶ ಹುಲಿಗೆಮ್ಮನವರ, ಫಕ್ಕಿರೇಶ ನಂದೆಣ್ಣವರ, ರಾಮು ಅಡಗಿಮನಿ, ನಾಗರಾಜ ನಂದೆಣ್ಣವರ ಮುಂತಾದವರು ಹಾಜರಿದ್ದರು.
ಅದೇ ರೀತಿ ಆದರಹಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ದಲಿತರು ಅಸ್ಪೃಶ್ಯತಾ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿರುವುದು ಸಂಘಟನೆಗಳಿಗೆ ಬಗೆದ ದ್ರೋಹವಾಗಿದೆ. ಇದೇ ಸ್ವಾಮೀಜಿಯವರು ಎಕೆ 47 ಗನ್ ಖರೀದಿಸಲು ಓಡಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಸ್ವಾಮಿಗಳನ್ನು ಕೂಡಲೇ ಗಡಿಪಾರು ಮಾಡುವಂತೆ ಪ್ರಮುಖರು ಆಗ್ರಹಿಸಿದರು.



