ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಆಷಾಢ ಶುದ್ಧ ಏಕಾದಶಿ ಅಂಗವಾಗಿ ಶನಿವಾರ ಸೊರಟೂರಿನ ಆರಾಧ್ಯದೈವ ಶ್ರೀ ಕಾಲಭೈರವೇಶ್ವರ ದೇವರಿಗೆ 108 ಪೂರ್ಣಕುಂಭ ಜಲಾಭಿಷೇಕ ಹಾಗೂ ಮಹಾರುದ್ರಾಭಿಷೇಕ ಭಕ್ತಿಭಾವದಿಂದ ನೆರವೇರಿತು.
ಬೆಳಿಗ್ಗೆ ಗ್ರಾಮದ ಸದ್ಭಕ್ತರು ಹಾಗೂ ಮುತ್ತೈದೆಯರು ಸಕಲ ವಾದ್ಯಮೇಳಗಳೊಂದಿಗೆ ಕಾಲಭೈರವೇಶ್ವರ ಗುಡ್ಡಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗಂಗಾಜಲವನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಂದು 108 ಪೂರ್ಣಕುಂಭ ಜಲಾಭಿಷೇಕ ಹಾಗೂ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಇತಿಹಾಸದ ಪ್ರಕಾರ, ಸೊರಟೂರಿನಲ್ಲಿ ಸುಮಾರು 9ನೇ ಶತಮಾನದಲ್ಲಿ ಬೃಹತ್ ಏಕಶಿಲೆಯ ಶ್ರೀ ಕಾಲಭೈರವೇಶ್ವರ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಗ್ರಾಮದ ಅಧಿದೇವತೆಯಾಗಿ ಕಾಲಭೈರವೇಶ್ವರ ನೆಲೆಸಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿದೆ.
ಹಿಂದೆ ಗ್ರಾಮದಲ್ಲಿ ಪ್ಲೇಗ್ ಮಹಾಮಾರಿ ಕಾಣಿಸಿಕೊಂಡ ಸಂದರ್ಭದಲ್ಲಿ ದೇವರ ಕೃಪೆಯಿಂದ ಪ್ರತಿ ವರ್ಷ ಆಷಾಢ ಶುದ್ಧ ಏಕಾದಶಿಯಂದು 108 ಪೂರ್ಣಕುಂಭ ಜಲಾಭಿಷೇಕ ನೆರವೇರಿಸುವ ಸಂಪ್ರದಾಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ದೇವಸ್ಥಾನದ ಅರ್ಚಕ ಪರಶುರಾಮ ಹೂಗಾರ ತಿಳಿಸಿದರು.
ದೇವರ ಕೈಯಲ್ಲಿರುವ ಕವಣಿಗೆ ಸಂಬಂಧಿಸಿದ ಹಲವು ಐತಿಹ್ಯಗಳು ಇಂದಿಗೂ ಗ್ರಾಮದಲ್ಲಿ ಪ್ರಚಲಿತದಲ್ಲಿದ್ದು, ಪ್ರತಿವರ್ಷ ಹೊಸ ಕವಣಿಯನ್ನು ಅಳವಡಿಸುವ ಸಂಪ್ರದಾಯವೂ ಮುಂದುವರಿದಿದೆ.
“ಆಷಾಢ ಶುದ್ಧ ಏಕಾದಶಿಯಂದು 108 ಪೂರ್ಣಕುಂಭ ಜಲಾಭಿಷೇಕ ನಡೆಸುವ ಸಂಪ್ರದಾಯ ಹಲವು ದಶಕಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಇದು ಗ್ರಾಮಸ್ಥರ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದೆ.”
– ಪರಶುರಾಮ ಹೂಗಾರ, ಅರ್ಚಕರು

