ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ವಿವಿಧ ದಲಿತ ಸಂಘಟನೆಗಳ ವತಿಯಿಂದ ಮನುಸ್ಮೃತಿ ದಹನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಇನ್ನೂ ದಲಿತರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ್ದ ಮನುಸ್ಮೃತಿಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸುಟ್ಟುಹಾಕಿ 98 ವರ್ಷಗಳಾದವು ಎಂದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸತೀಶ ಹುಲಿ ಮಾತನಾಡಿ, ಸಮ ಸಮಾಜ ನಿರ್ಮಾಣದ ಕನಸು ಹೊತ್ತು, ಸಮಾನತೆ, ಸಹೋದರತೆ, ಭ್ರಾತೃತ್ವದ ಆಶಯದೊಂದಿಗೆ ಸಂವಿಧಾನವನ್ನು ರೂಪಿಸಿಕೊಂಡೆವು. ಈ ಸಂವಿಧಾನ ರಚನೆಗೆ ಬಾಬಾ ಸಾಹೇಬರ ಕೊಡುಗೆ ಅಗಾಧ. ಆದರೆ ಸಂವಿಧಾನ ಸಮರ್ಪಣೆಯಾದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯು ನಮ್ಮ ಸಂವಿಧಾನದ ಮೇಲೆ ಅಸಹನೆಯನ್ನು ಹೊರಹಾಕಿತ್ತು ಎಂದು ಸ್ಮರಿಸಿದರು.
ಡಿಎಸ್‌ಎಸ್ ಮುಖಂಡ ಬಸವರಾಜ ಕೆ. ಪೂಜಾರ ಮಾತನಾಡಿ, ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿಯು ಅಂದಿನಿಂದ ಇಂದಿನವರೆಗೂ ಆಂತರಿಕವಾಗಿಯೂ ಬಹಿರಂಗವಾಗಿಯೂ ಡಾ. ಅಂಬೇಡ್ಕರ್ ಅವರ ಮೇಲೆ, ಸಂವಿಧಾನದ ಮೇಲೆ ಅಸಹಿಷ್ಣುತೆಯನ್ನು ಹೊರಹಾಕುತ್ತಲೇ ಬಂದಿದೆ. ಬಾಬಾ ಸಾಹೇಬರು ಮನುಸ್ಮೃತಿಯನ್ನು ದಹಿಸಿದ ದಿನವಾದ ಡಿಸೆಂಬರ್ 25ರಂದು ಸಾಂಕೇತಿಕವಾಗಿ ಪಾಲಿಸಿ, ಡಾ. ಅಂಬೇಡ್ಕರ್ ಹೋರಾಟವನ್ನು ಮುಂದುವರಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪ್ರಕಾಶ ಕೇಲೂರ, ವಾಸುದೇವ ಹುಣಸೀಮರದ, ಗುರುರಾಜ ಭಜಂತ್ರಿ, ವಿದ್ಯಾಧರ ದೊಡ್ಡಮನಿ, ಎಸ್.ಎನ್. ಬಳ್ಳಾರಿ ಗುರುಗಳು, ಶಿವಾನಂದ ಗೋಗೇರಿ, ಫಕ್ಕೀರಪ್ಪ ಭಜಂತ್ರಿ, ಮಲ್ಲಪ್ಪ ಸಣ್ಣಕ್ಕಿ, ಬಸವರಾಜ ಸತ್ಯಮ್ಮನವರ, ಪ್ರಕಾಶ ಕಾಳೆ, ಪರಮೇಶ ಕಾಳೆ, ಶಂಭು ಕಾಳೆ, ಪ್ರಕಾಶ ಕಾಳೆ ಹೊಂಬಳ, ಮಂಜು ಹುಣಸೀಮರದ, ಶ್ರೀನಿವಾಸ ಬಾಗಲಕೋಟ, ಸಿದ್ದಣ್ಣ ಮೇಳೆನ್ನವರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ದಲಿತ ಮುಖಂಡ ರಮೇಶ ಬಾಳಮ್ಮನವರ ಮಾತನಾಡುತ್ತ, ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ದಲಿತ, ಸಮಾನಮನಸ್ಕ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.



