ಬೆಂಗಳೂರು: ಅರ್ಧದಲ್ಲೇ ಹನಿಮೂನ್ ಪ್ರವಾಸದಿಂದ ವಾಪಸ್ಸಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ನವವಧು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ನವವಧುವನ್ನು ಗಾನವಿ (26) ಎಂದು ಗುರುತಿಸಲಾಗಿದೆ. ಮದುವೆಯಾಗಿ ಎರಡು ತಿಂಗಳು ಕೂಡ ಪೂರ್ಣಗೊಳ್ಳುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ.
ಅಕ್ಟೋಬರ್ 29ರಂದು ಗಾನವಿ ಮತ್ತು ಸೂರಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ದೂರಿಯಾಗಿ ವಿವಾಹ ಸ್ವಾಗತ ಸಮಾರಂಭ ನಡೆಸಲಾಗಿತ್ತು. ಮದುವೆಯ ಬಳಿಕ ಕಳೆದ ಹತ್ತು ದಿನಗಳ ಹಿಂದೆ ದಂಪತಿ ಹನಿಮೂನ್ಗೆಂದು ಶ್ರೀಲಂಕಾಗೆ ತೆರಳಿದ್ದರು. ಆದರೆ ಡಿಸೆಂಬರ್ 21ರಂದು ಹನಿಮೂನ್ ಮುಗಿಸದೇ ಅರ್ಧದಲ್ಲೇ ಇಬ್ಬರೂ ಶ್ರೀಲಂಕಾದಿಂದ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.
ಹನಿಮೂನ್ ಸಂದರ್ಭದಲ್ಲೇ ದಂಪತಿಯ ನಡುವೆ ಜಗಳ ಉಂಟಾಗಿದ್ದು, ಡಿಸೆಂಬರ್ 22ರಂದು ಗಾನವಿಯನ್ನು ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 23ರಂದು ಮಧ್ಯಾಹ್ನ ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಮನೆಯವರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ವೇಳೆ ಗಾನವಿ ಬ್ರೈನ್ ಡೆಡ್ ಸ್ಥಿತಿಗೆ ತಲುಪಿರುವುದಾಗಿ ವೈದ್ಯರು ತಿಳಿಸಿ, ವೆಂಟಿಲೇಟರ್ನಲ್ಲಿ ಇರಿಸಿದ್ದರು. ಆದರೆ ಡಿಸೆಂಬರ್ 25ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಗಾನವಿ ಸಾವನ್ನಪ್ಪಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಗಾನವಿ ಕುಟುಂಬಸ್ಥರು ಸೂರಜ್ ಮತ್ತು ಅವರ ಕುಟುಂಬದ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೂರಜ್ ಕುಟುಂಬಸ್ಥರ ವಿಚಾರಣೆ ನಡೆಸುತ್ತಿದ್ದಾರೆ.



