ದೊಡ್ಡಬಳ್ಳಾಪುರ: ಕಾಣೆಯಾಗಿದ್ದ ಪ್ರಥಮ ಪಿಯುಸಿ ಕಾಲೇಜು ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಸಾಧು ಮಠ ಗ್ರಾಮದ ಬಳಿ ನಡೆದಿದೆ.ಮೃತ ವಿದ್ಯಾರ್ಥಿಯನ್ನು ನಿಶಾಂಕ್ ಎಂದು ಗುರುತಿಸಲಾಗಿದ್ದು, ರಸ್ತೆ ಬದಿಯ ಮೋರಿ ಒಂದರಲ್ಲಿ ಬೈಕ್ ಸಮೇತ ಬಾಲಕನ ಶವ ಪತ್ತೆಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಡಿಸೆಂಬರ್ 15ರಂದು ನಿಶಾಂಕ್ ಕಾಣೆಯಾಗಿದ್ದು, ಡಿಸೆಂಬರ್ 16ರಂದು ಅವರ ನಾಪತ್ತೆ ಕುರಿತು ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನಿಶಾಂಕ್ ಪಕ್ಕದ ಗ್ರಾಮದ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಯುವತಿ ಕಡೆಯವರಿಂದ ನಿಶಾಂಕ್‌ಗೆ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತೆಂದು ತಿಳಿದುಬಂದಿದೆ. ಇದೀಗ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಪ್ರೀತಿಸುತ್ತಿದ್ದ ಯುವತಿಯ ಕಡೆಯವರಿಂದಲೇ ಕೊಲೆ ಮಾಡಿರುವ ಶಂಕೆಯನ್ನು ಮೃತನ ಪೋಷಕರು ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.



