ನೆಲಮಂಗಲ:- ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟಗೆರೆ ಕ್ರಾಸ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ.
ಘಟನೆಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಹರೀಶ್(39) ಮತ್ತು ವೀರಭದ್ರ(80) ಮೃತರು. ಕಾರಿನಲ್ಲಿದ್ದ ಗೌರಮ್ಮ, ಮೈತ್ರಿ, ಸಿರಿ, ವಂದನಾಗೆ ಗಂಭೀರ ಗಾಯಗಳಾಗಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಗುರುವಾರ ದಾಸರಹಳ್ಳಿಯಲ್ಲಿರುವ ಸ್ವಂತ ಮನೆಯಿಂದ ಕುಟುಂಬದೊಂದಿಗೆ ಹುಟ್ಟೂರು ಗೌರಿಬಿದನೂರಿಗೆ ತೆರಳಿದ್ದ ಹರೀಶ್, ಜಮೀನು ವಿಚಾರ ಮುಗಿಸಿಕೊಂಡು ಸಂಜೆ 6 ಗಂಟೆ ಸುಮಾರಿಗೆ ವಾಪಸ್ ಪ್ರಯಾಣ ಆರಂಭಿಸಿದ್ದರು. ರೈಲ್ವೆ ಗೊಲ್ಲಹಳ್ಳಿ–ಹೆಸರಘಟ್ಟ ಮಾರ್ಗವಾಗಿ ದಾಸರಹಳ್ಳಿಗೆ ತೆರಳುವಾಗ, ತೋಟದ ಗುಡ್ಡದಹಳ್ಳಿ ಟರ್ನಿಂಗ್ ಬಳಿ ಲಾರಿಯನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ ಎದುರಿನಿಂದ ಬಂದ ಮತ್ತೊಂದು ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಕಾರನ್ನು ಬಲಭಾಗಕ್ಕೆ ತಿರುಗಿಸಿದ್ದಾರೆ.
ಸಂಜೆ 7.30ರ ಹೊತ್ತಿಗೆ ಕತ್ತಲಿನಲ್ಲೇ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹರೀಶ್ ಮತ್ತು ಅವರ ತಂದೆ ವೀರಭದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ.



