ಶ್ರೀನಿವಾಸ ಪ್ರೊಡಕ್ಷನ್ಸ್ ಸಮರ್ಪಿಸಿ, ಸ್ನೇಹಾಲಯಂ ಕ್ರಿಯೆಷನ್ಸ್ ಲಾಂಛನದಲ್ಲಿ ಶಿಲ್ಪಾ ಶ್ರೀನಿವಾಸ್ ನಿರ್ಮಿಸುತ್ತಿರುವ ಹೊಸ ಸಿನಿಮಾ ‘ಚಂದ್ರಗಿರಿ’ ಚಿತ್ರೀಕರಣ ಜನವರಿ 8ರಿಂದ ಆರಂಭವಾಗಲಿದೆ. ಬಹಳ ದಿನಗಳ ನಂತರ ಡೈನಾಮಿಕ್ ಹೀರೋ ದೇವರಾಜ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ವಿಶೇಷ.
ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಮೂರು ಹಾಡುಗಳನ್ನು ಅನಿರುದ್ಧ ಶಾಸ್ತ್ರಿ, ಕಾರುಣ್ಯ ಮತ್ತು ಶ್ರೀ ಕೃಷ್ಣ ಹಾಡಿದ್ದಾರೆ.
ತುಳಸಿಪುರ ಎಂಬ ಊರಿನಲ್ಲಿ ಪ್ರತೀ ಅಮಾವಾಸ್ಯೆಯ ದಿನ ಕಾಣಿಸಿಕೊಳ್ಳುವ ಎರಡು ಶವಗಳು, ಬೀದಿ ಬೀದಿಗಳಲ್ಲಿ ಕಂಡುಬರುವ ರಕ್ತದ ಕಲೆಗಳು, ಆ ರಹಸ್ಯದ ಹಿಂದಿರುವ ಅಗೋಚರ ಶಕ್ತಿ ಹಾಗೂ ದೈವದ ನೆಲೆಯನ್ನು ಧ್ವಂಸ ಮಾಡಲು ಆತ್ಮಗಳನ್ನು ಸಿದ್ಧಪಡಿಸುವ ದುಷ್ಟರನ್ನು ಆ ಶಕ್ತಿ ಹೇಗೆ ಧಮನಗೊಳಿಸುತ್ತದೆ ಎಂಬುದೇ ಚಿತ್ರದ ಕಥಾವಸ್ತು.
ಹಾರರ್–ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಸಿನಿಮಾ ಚಿಕ್ಕಬಳ್ಳಾಪುರ, ಬೆಳ್ಳಿಕೆರೆ, ಹೊಸಕೋಟೆ ಸುತ್ತಮುತ್ತ ಚಿತ್ರೀಕರಣಗೊಳ್ಳಲಿದೆ. ಈಗಾಗಲೇ ಬಿಡುಗಡೆಗೆ ಸಿದ್ದವಾಗಿರುವ ಮುಗಿಲ ಮಲ್ಲಿಗೆ ಚಿತ್ರದ ನಿರ್ದೇಶಕ ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.



