ಬೆಂಗಳೂರು: ಪ್ರೀತಿ–ಪ್ರೇಮ–ಮದುವೆ ಹೆಸರಿನಲ್ಲಿ ಯುವತಿಯರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಶುಭಾಂಶು ಶುಕ್ಲಾ ಎಂದು ಗುರುತಿಸಲಾಗಿದೆ. ಮೂಲತಃ ಹರಿಯಾಣ ರಾಜ್ಯದವನಾದ ಈತ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಟಿ. ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಐಷಾರಾಮಿ ಜೀವನಶೈಲಿಯಿಂದ ಯುವತಿಯರ ಮನಗೆದ್ದ ಶುಭಾಂಶು, ಪ್ರೀತಿ ಹಾಗೂ ಮದುವೆ ಭರವಸೆ ನೀಡಿ ಹಣ ಪಡೆದು ವಂಚನೆ ನಡೆಸುತ್ತಿದ್ದ ಎನ್ನಲಾಗಿದೆ.
ವಂಚನೆಯ ಸತ್ಯ ಬೆಳಕಿಗೆ ಬಂದ ಬಳಿಕ ಹಲವು ಯುವತಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಆರೋಪಿ ಮೊದಲು ಬಾಲಕಿಯೊಬ್ಬಳೊಂದಿಗೆ ಸ್ನೇಹ ಬೆಳೆಸಿ, ಆಕೆಯ ಮೂಲಕ ಕುಟುಂಬದ ವಿಶ್ವಾಸ ಗಳಿಸಿ ಮನೆಮಗನಂತೆ ವರ್ತಿಸಿದ್ದ. ನಂತರ ಆಕೆಯ ಸಹೋದರಿಯನ್ನು ಪ್ರೀತಿ ಬಲೆಗೆ ಬೀಳಿಸಿ ಖಾಸಗಿ ಫ್ಲಾಟ್‌ನಲ್ಲಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸವಾಗಿದ್ದ. ಈ ಅವಧಿಯಲ್ಲಿ ಯುವತಿಯ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ನಡುವೆ ಶುಭಾಂಶುಗೆ ಈಗಾಗಲೇ ಮದುವೆಯಾಗಿರುವ ವಿಷಯ ಯುವತಿಗೆ ತಿಳಿದುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ವಿಚ್ಛೇದನ ಪಡೆಯುವುದಾಗಿ ನೆಪ ಹೇಳಿ ಮತ್ತಷ್ಟು ಹಣ ಪಡೆದು, ಯುವತಿಗೆ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



