ಗದಗ: ರಾಜ್ಯದಲ್ಲಿ ಡ್ರಗ್ ಮಾಫಿಯಾ ಚಟುವಟಿಕೆಗಳ ಕುರಿತು ಶಾಸಕ ಸಿ.ಸಿ. ಪಾಟೀಲ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು ಎರಡು ಬಾರಿ ಕರ್ನಾಟಕಕ್ಕೆ ಬಂದು ಡ್ರಗ್ ಜಾಲವನ್ನು ಪತ್ತೆಹಚ್ಚಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.
ನಮ್ಮ ರಾಜ್ಯದ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಇಲಾಖೆ ಏನು ಮಾಡುತ್ತಿವೆ ಎಂಬ ಪ್ರಶ್ನೆ ಉದ್ಭವಿಸಿದೆ. ಅಧಿಕಾರಿಗಳ ಕೈಗಳನ್ನು ಕಟ್ಟಿಹಾಕಲಾಗಿದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಎಂದು ಶಾಸಕ ಸಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು. ಮುಂಬೈ ಪೊಲೀಸರು ಇಲ್ಲಿನ ಡ್ರಗ್ ಜಾಲ ಪತ್ತೆ ಮಾಡುತ್ತಿರುವುದು ಆಡಳಿತ ವೈಫಲ್ಯಕ್ಕೆ ಉದಾಹರಣೆ ಎಂದು ಹೇಳಿದರು.
ಈ ವೇಳೆ ಡ್ರಗ್ ವಶಪಡಿಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಅವರು ಮುಂದಿಟ್ಟರು. 2015ರಲ್ಲಿ 10,084 ಕೆಜಿ ಡ್ರಗ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ 104 ಕೋಟಿ 17 ಲಕ್ಷ ರೂ. ಆಗಿದೆ. 2023ರಲ್ಲಿ 12,340 ಕೆಜಿ ಡ್ರಗ್ ವಶಪಡಿಸಲಾಗಿದ್ದು, ಅದರ ಮೌಲ್ಯ 18 ಕೋಟಿ 7 ಲಕ್ಷ ರೂ. ಎಂದು ತಿಳಿಸಿದರು. 2024ರಲ್ಲಿ 7,016 ಕೆಜಿ ಡ್ರಗ್ ಪತ್ತೆಯಾಗಿದ್ದು, ಅದರ ಮೌಲ್ಯ 16 ಕೋಟಿ 27 ಲಕ್ಷ ರೂ. ಆಗಿದೆ. ಈ ಬಗ್ಗೆ ಗೃಹ ಸಚಿವರಿಂದ ಇದುವರೆಗೆ ಸ್ಪಷ್ಟ ಉತ್ತರ ಇಲ್ಲ ಎಂದು ಆರೋಪಿಸಿದರು.
ಕಾನೂನು ಕ್ರಮ ಕೈಗೊಳ್ಳುವುದೇ ಇಲ್ಲ ಅಂದರೆ ಗೃಹ ಸಚಿವರ ಅಗತ್ಯವೇನು ಎಂಬ ಪ್ರಶ್ನೆಯನ್ನೂ ಶಾಸಕ ಎತ್ತಿದರು. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಆಡಳಿತ ರಹಿತ ಸರ್ಕಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಅಬಕಾರಿ ಇಲಾಖೆಯ ಮದ್ಯ ಲೈಸೆನ್ಸ್ ನೀತಿಗೂ ಸಿ.ಸಿ. ಪಾಟೀಲ್ ವಿರೋಧ ವ್ಯಕ್ತಪಡಿಸಿದರು. ಐದು ವರ್ಷಗಳಿಗೆ ಮದ್ಯ ಲೈಸೆನ್ಸ್ ರಿನಿವಲ್ ಮಾಡಲಾಗುತ್ತಿದ್ದು, ಡಿಸೆಂಬರ್ 31ರಂದು ಬೆಳಿಗ್ಗೆ 6 ಗಂಟೆಯಿಂದ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಮಧ್ಯರಾತ್ರಿ 12ರಿಂದ 1 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂಬುದನ್ನೂ ಉಲ್ಲೇಖಿಸಿದರು. ಮದ್ಯ ಮಾರಾಟಕ್ಕೆ ಒಂದು ಕಡೆ ಅನುಮತಿ ನೀಡುತ್ತಾ, ಮತ್ತೊಂದೆಡೆ ಪೊಲೀಸರ ಮೂಲಕ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸುವುದು ದ್ವಂದ್ವ ನೀತಿ ಎಂದು ಆರೋಪಿಸಿದರು. ಮದ್ಯ ಮಾರಾಟ ನೀತಿ ವಿರುದ್ಧ ಗದಗದಲ್ಲಿ ಶಾಸಕ ಸಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.



