ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಜೆಸಿಬಿಗಳ ಘರ್ಜನೆ ಆರಂಭವಾಗಿದ್ದು, ರಸ್ತೆ ಬದಿಯ ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ.
ಚಳ್ಳಕೆರೆ ಗೇಟ್ ಬಳಿ ರಸ್ತೆ ಪಕ್ಕ ನಿರ್ಮಿಸಲಾಗಿದ್ದ ಅಕ್ರಮ ಗೂಡಂಗಡಿಗಳನ್ನು ಚಿತ್ರದುರ್ಗ ನಗರಸಭೆ ಆಯುಕ್ತೆ ಲಕ್ಷ್ಮೀ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಗುತ್ತಿದೆ. ಹಲವು ಬಾರಿ ನೋಟಿಸ್ ನೀಡಿದ್ದರೂ ವ್ಯಾಪಾರಿಗಳು ನಿರ್ಲಕ್ಷ್ಯ ವಹಿಸಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ.
ಹಣ್ಣು, ತರಕಾರಿ, ಟೀ ಸ್ಟಾಲ್, ಗುಜರಿ ಅಂಗಡಿ ಸೇರಿದಂತೆ ವಿವಿಧ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ. ಗೂಡಂಗಡಿಗಳನ್ನು ತೆರವು ಮಾಡದಂತೆ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರೂ, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆ ಹಾಗೂ ಕೋರ್ಟ್ ಆದೇಶದ ಆಧಾರದ ಮೇಲೆ ನಗರಸಭೆ ಈ ಕ್ರಮ ಕೈಗೊಂಡಿದೆ. ನಗರಸಭೆ ಅಧಿಕಾರಿಗಳ ಕ್ರಮಕ್ಕೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.



