ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕಗೊಂಡಿರುವ ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಕರ್ನಾಟಕ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ತಾವರಚಂದ್ ಗೆಹ್ಲೋಟ್ ಅವರು ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಅವರನ್ನು ಕುಲಪತಿಯಾಗಿ ನೇಮಕ ಮಾಡಿದ್ದು, ಗುರುವಾರ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಈ ನೇಮಕ ತಮ್ಮ ಜೀವನದ ಅತ್ಯುನ್ನತ ಗೌರವ ಹಾಗೂ ಮಹತ್ತರ ಜವಾಬ್ದಾರಿಯಾಗಿದ್ದು, ವಿಶ್ವವಿದ್ಯಾಲಯವನ್ನು ಶೈಕ್ಷಣಿಕ ಶ್ರೇಷ್ಠತೆ, ಗುಣಮಟ್ಟದ ಸಂಶೋಧನೆ, ನವೋದ್ಯಮ, ವಿಸ್ತರಣಾ ಚಟುವಟಿಕೆಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಆದರ್ಶ ಸಂಸ್ಥೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಸಂಸ್ಥಾಪಕ ಕುಲಸಚಿವ ಹಾಗೂ ಪ್ರಭಾರ ಕುಲಪತಿಯಾಗಿ ಸೇವೆ ಸಲ್ಲಿಸಿರುವ ಅನುಭವದಿಂದ ವಿಶ್ವವಿದ್ಯಾಲಯದ ಧ್ಯೇಯ, ದೃಷ್ಟಿಕೋನ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಸಮಗ್ರ ಅರಿವು ಹೊಂದಿದ್ದು, ಎಲ್ಲ ಹಿತಾಸಕ್ತಿಪಕ್ಷಗಳ ಸಹಯೋಗದೊಂದಿಗೆ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಅವರು ಕಾನೂನು ಶಿಕ್ಷಣ ಕ್ಷೇತ್ರದ ಹಿರಿಯ ಪ್ರಾಧ್ಯಾಪಕರಾಗಿದ್ದು, ಬೋಧನೆ, ಸಂಶೋಧನೆ, ಶೈಕ್ಷಣಿಕ ಆಡಳಿತ ಹಾಗೂ ಸಂಸ್ಥಾ ನಿರ್ಮಾಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಗಳ ಸದಸ್ಯರಾಗಿ, ಕರ್ನಾಟಕ ಕಾನೂನು ಆಯೋಗದ ಸದಸ್ಯರಾಗಿ ಸೇರಿದಂತೆ ಹಲವು ಮಹತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ನೂತನ ಕುಲಪತಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ವಿಶ್ವವಿದ್ಯಾಲಯವು ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿ ರಾಷ್ಟ್ರಮಟ್ಟದಲ್ಲಿ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ವಿಶ್ವವಿದ್ಯಾಲಯ ಕುಟುಂಬ ವ್ಯಕ್ತಪಡಿಸಿದೆ.



