ಬೆಂಗಳೂರು: ಇತ್ತೀಚೆಗೆ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಜೆಸಿಬಿ ಬಳಸಿ ತೆರವು ಮಾಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ಕೋಗಿಲು ಲೇಔಟ್ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕರ್ನಾಟಕದ ಜನ ವಿಪತ್ತಿಗೊಳಗಾಗಿ ಪರಿಹಾರಕ್ಕಾಗಿ ಕಾಯುತ್ತಿದ್ದರೂ ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ಧರ್ಮದ ಓಲೈಕೆ ಹಾಗೂ ತುಷ್ಟೀಕರಣಕ್ಕಾಗಿ ಅತಿವೇಗವಾಗಿ ಹಾಗೂ ತುರ್ತಾಗಿ ಔಪಚಾರಿಕ ಪರಿಹಾರ ನೀಡಲು ಮುಂದಾಗಿರುವುದು ಅತಿ ಬೇಸರದ ಸಂಗತಿ ಎಂದು ಬರೆದುಕೊಂಡಿರುವ ಜೋಶಿ, ಬರ ಮತ್ತು ಪ್ರವಾಹದಂತಹ ವಿಪತ್ತುಗಳ ಪರಿಹಾರವನ್ನು ಪಡೆಯಲು ರಾಜ್ಯಾದ್ಯಂತ ಜನರು ವರ್ಷಗಳಿಂದ ಕಾಯುತ್ತಿದ್ದರು, ಈ ಸಂದರ್ಭದಲ್ಲಿ, ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ.
ಈ ಅತಿಕ್ರಮಣದಾರರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದಾಗಿ ಸಹ ಘೋಷಿಸಿದ್ದು, ಪ್ರತಿ ಮನೆಗೆ 8 ರಿಂದ 11 ಲಕ್ಷ ರೂ. ಮತ್ತು ಸಬ್ಸಿಡಿ ನೀಡುವುದಾಗಿ ಹೇಳಿದ್ದು, ಇದೊಂದು ಬಾರಿ ಪರಿಹಾರ ಕಲ್ಪಿಸಲಾಗುತ್ತದೆ ಎಂದಿರುವುದು ವಿಪರ್ಯಾಸ. ಸರ್ಕಾರದ್ದು ಅದ್ಯಾವ ರೀತಿಯ ಪರಿಹಾರ ಕ್ರಮ ಎಂದು ಜೋಶಿ ಪ್ರಶ್ನಿಸಿದ್ದಾರೆ.



