ಉತ್ತರ ಕರ್ನಾಟಕದ ಅತ್ಯಂತ ಪ್ರಮುಖವಾದ ಅರೆ-ಶುಷ್ಕ ಪ್ರದೇಶಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯು ಇತ್ತೀಚಿನ ದಿನಗಳಲ್ಲಿ ವಿರಳ, ಅನಿಶ್ಚಿತ, ಅನಿಯಮಿತ ಮಳೆ, ಬರಗಾಲ ಮತ್ತು ಭಾರೀ ಮಳೆಯಿಂದ ತತ್ತರಿಸುವದರಿಂದ ರೈತರು ತೀವ್ರ ಬೆಳೆ ಆರ್ಥಿಕ ನಷ್ಟವನ್ನು ಎದುರಿಸುವಂತೆ ಮಾಡಿದೆ.
ಇಂತಹ ಬದಲಾಗುತ್ತಿರುವ ಹವಾಮಾನ ಸನ್ನಿವೇಶದ ಏರಿಳಿತಗಳನ್ನು ನಿಭಾಯಿಸಲು ನಿರಂತರ ಕೃಷಿ ಸಂಶೋಧನೆ ಮತ್ತು ವಿಸ್ತರಣೆಯ ಮೂಲಕ ರೈತರಿಗೆ ಉತ್ತಮ ತಾಂತ್ರಿಕ ಬೆಂಬಲ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನದ ಅಗತ್ಯವಿದೆ. ಈ ದಿಶೆಯಲ್ಲಿ ವಿಜಯಪುರದ ಕೃಷಿ ಸಂಶೋಧನಾ ಕೇಂದ್ರವು ಒಣ ಭೂಮಿ ಕೃಷಿಯ ಸಂಶೋಧನೆಯ ಉದ್ದೇಶಕ್ಕಾಗಿ ಸ್ಥಾಪಿಸಿತು. ಈ ಕೇಂದ್ರವು ಪ್ರಸ್ತುತ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರವೆಂದು ಈಗ ಮರುನಾಮಕರಣಗೊಂಡಿತು. ವಿಜ್ಞಾನಿಗಳ ಸತತ ವೈಜ್ಞಾನಿಕ ಸಂಶೋಧನೆಗಳಿಂದ ಸಂಶೋಧನಾ ಕೇಂದ್ರವು ಅನೇಕ ರಾಷ್ಟ್ರೀಯ ಮನ್ನಣೆಗಳನ್ನು ಪಡೆದಿದೆ.
ರೈತ ಸಮುದಾಯದ ಆಕಾಂಕ್ಷೆಗಳು, ದಾರ್ಶನಿಕರು, ಸ್ಥಳೀಯ ರಾಜಕೀಯ ನಾಯಕರು ನೀತಿ ನಿರೂಪಕರು ಹಾಗೂ ಸರ್ಕಾರ ಮಾಡಿದ ಪ್ರಯತ್ನಗಳ ಫಲವಾಗಿ ಈ ಪ್ರದೇಶದಲ್ಲಿ ರೈತ ಮಕ್ಕಳಿಗೆ ಕೃಷಿ ಶಿಕ್ಷಣವನ್ನು ನೀಡುವ ಪರಿಣಾಮವಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಕೃಷಿ ಕಾಲೇಜನ್ನು 25ನೇ ಅಕ್ಟೋಬರ್ 1990ರಂದು ವರದನ್ ಸಮಿತಿಯ ಶಿಫಾರಸ್ಸು ಪ್ರಕಾರ ಸ್ಥಾಪನೆಯಾಯಿತು. ರೈತರಿಗೆ ಅಗತ್ಯವಿರುವ ಕೃಷಿ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುತ್ತಿವೆ ಮತ್ತು ಇದೇ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರವಿರುವದರಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪಣೆಯಲ್ಲಿ ತರಬೇತಿಗಳನ್ನು ಆಯೋಜಿಸುವುದು, ಉತ್ತಮ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡು ರೈತರ ಅನುಕೂಲಕ್ಕಾಗಿ ತಂತ್ರಜ್ಞಾನಗಳನ್ನು ತ್ವರಿತಗತಿಯಲ್ಲಿ ನೀಡುತ್ತಿವೆ. ಇದಲ್ಲದೆ ಆವರಣದಲ್ಲಿ ರಾಜ್ಯ ಕೃಷಿ ಇಲಾಖೆ ಕಚೇರಿಯನ್ನು ಸಹ ಒಳಗೊಂಡಿದೆ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು ನೀಡುವ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ಸಹ ಹೊಂದಿದೆ.
ಇಂತಹ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಸಂಸ್ಥೆಯಲ್ಲಿ ಪ್ರತಿ ವರ್ಷ ಹಿಂಗಾರು ಹಂಗಾಮಿನ ಕೊನೆಯ ಡಿಸೆಂಬರ್‌ನಲ್ಲಿ ಅತೀ ದೊಡ್ಡ `ಕೃಷಿಮೇಳ’ವನ್ನು ನಡೆಸಲಾಗುತ್ತದೆ. ಈ ಮೇಳದಲ್ಲಿ ಕೃಷಿ ಸಮುದಾಯಕ್ಕೆ ಬೇಕಾದ ಆಧುನಿಕ ಕೃಷಿ ತಂತ್ರಜ್ಞಾನ, ಇದು ಕೃಷಿ ಕ್ಷೇತ್ರದಲ್ಲಿ ಆದ ನಾವೀನ್ಯತೆಗಳು ಪ್ರದರ್ಶಿಸಲು ಮತ್ತು ಪ್ರಸಾರ ಮಾಡಲು ಅನೇಕ ಸಾರ್ವಜನಿಕ ಹಾಗೂ ಖಾಸಗಿ ವಲಯಗಳ ಕೃಷಿ ಉದ್ಯಮಿಗಳು, ಕೃಷಿ ವೃತ್ತಿಪರರು ಮತ್ತು ಸಂಬಂಧಿತ ಸಂಸ್ಥೆಗಳು ಭಾಗವಹಿಸುವದರಿಂದ ಅನೇಕ ಪ್ರಯೋಜನಗಳಾಗುತ್ತಿವೆ.
ಈ ವರ್ಷ ವಿಜಯಪುರ ಕೃಷಿ ಕಾಲೇಜಿನ ಆವರಣದಲ್ಲಿ `ಕೃಷಿಯಲ್ಲಿ ನಾವೀನ್ಯತೆಗಳು ಮತ್ತು ನವೋದ್ಯಮಗಳು’ ಎಂಬ ಘೋಷವಾಕ್ಯದ ಅಡಿಯಲ್ಲಿ 2026ರ ಜನವರಿ 4ರಿಂದ 6ರವರೆಗೆ ಕೃಷಿಮೇಳವನ್ನು ಆಯೋಜಿಸಲಾಗಿದೆ. ಆವರಣದಲ್ಲಿ ಕೈಗೊಳ್ಳಲಾದ ಸಂಶೋಧನೆ, ವಿಸ್ತರಣೆ ಮತ್ತು ಬೋಧನಾ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ರೈತ ಸಮುದಾಯಕ್ಕೆ ತಿಳಿಸಲಾಗುತ್ತದೆ. ವಿವಿಧ ಕ್ಷೇತ್ರ ಪ್ರಯೋಗಗಳು ಮತ್ತು ಪ್ರದರ್ಶನಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲು ಬಿಡುಗಡೆಯಾದ/ಬಿಡುಗಡೆಯಾಗಲಿರುವ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತದೆ.
ಒಟ್ಟಾರೆಯಾಗಿ 2026ರ ಕೃಷಿಮೇಳವು ಉತ್ತರ ಕರ್ನಾಟಕದ ಹೆಚ್ಚಿನ ಸಂಖ್ಯೆಯ ರೈತರಿಗೆ ಇಂದಿನ ಕೃಷಿಯಲ್ಲಿನ ಹೊಸ ಅವಿಷ್ಕಾರಗಳ ಮೇಲೆ ಹೆಚ್ಚಿನ ಒತ್ತು ನೀಡುವ ಮೂಲಕ ವ್ಯಾಪಕ ಮಾಹಿತಿಯನ್ನು ವಿಜಯಪುರ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ ಕೃಷಿಮೇಳದಲ್ಲಿ ಒದಗಿಸುವ ನಿರೀಕ್ಷೆಯಿದೆ. ಹಿಂದಿನ ವರ್ಷಗಳಂತೆ ಈ ಕೃಷಿಮೇಳದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಂರಕ್ಷಣೆ, ಉತ್ತಮ ಬೆಳೆ ಕಾಲುವೆ ಪದ್ಧತಿಗಳು, ಜಾನುವಾರಗಳನ್ನು ಒಳಗೊಂಡ ಸಮಗ್ರ ಕೃಷಿ ಪದ್ಧತಿಗಳು, ಸಾವಯವ, ನೈಸರ್ಗಿಕ ಕೃಷಿ ಪದ್ಧತಿ, ಕೃಷಿಯಲ್ಲಿ ಯಾಂತ್ರೀಕರಣ (ಡ್ರೋನ್ ತಂತ್ರಜ್ಞಾನ ಸೇರಿದಂತೆ), ಹವಾಮಾನ ವೈಪರೀತ್ಯಗಳ ನಿರ್ವಹಣೆ ಮತ್ತು ಅದರ ಪ್ರಕೋಪಗಳ ತಗ್ಗಿಸುವಿಕೆ, ಮಾರುಕಟ್ಟೆ ಬುದ್ಧಿಮತ್ತೆ ಮತ್ತು ಆರ್ಥಿಕ ಭದ್ರತೆ ಇತ್ಯಾದಿಗಳ ಕುರಿತು ಕೃಷಿ ತಂತ್ರಜ್ಞಾನಗಳನ್ನು ಪಡೆಯಲು ಮತ್ತು ನವೀಕರಿಸಲು ಈ ಪ್ರದೇಶದ ಹೆಚ್ಚಿನ ರೈತರನ್ನು ಆಕರ್ಷಿಸುವ ನಿರೀಕ್ಷೆ ಇದೆ.
ಕೃಷಿ ಮೇಳವನ್ನು ಜ. 4ರಂದು ಬೆಳಿಗ್ಗೆ 11 ಗಂಟೆಗೆ ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಕೃಷಿ ವಸ್ತುಪ್ರದರ್ಶನ ಉದ್ಘಾಟಿಸಲಿದ್ದು, ಕೃಷಿ ಪ್ರಕಟಣೆಗಳ ಬಿಡುಗಡೆಯನ್ನು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್.ಪಾಟೀಲ ನೇರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೊಂಡ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾನ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ ಎನ್, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಬಿ.ಹುಕ್ಕೇರಿ, ಸಂಸದರಾದ ರಮೇಶ ಜಿಗಜಿಣಗಿ, ಡಾ. ಸುಧಾ ಮೂರ್ತಿ, ಜಿಲ್ಲೆಯ ಎಲ್ಲ ವಿಧಾನಸಭೆ ಶಾಸಕರು ಮತ್ತು ವಿಧಾನ ಪರಿಷತ್ ಶಾಸಕರು ಭಾಗವಹಿಸಲಿದ್ದಾರೆ. ಧಾರವಾಡ ಕೃಷಿ ವಿ.ವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಧಾರವಾಡ ಕೃಷಿ ವಿ.ವಿ ವ್ಯವಸ್ಥಾಪನಾ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ. ಆನಂದ, ಸಿ.ಇ.ಓ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಆಗಮಿಸಲಿದ್ದಾರೆ.



