ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಜ. 5ರಂದು ಜರುಗಲಿದ್ದು, ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಬುಧವಾರ ಸಂಜೆ ಬಿಜಕಲ್‌ನ ಮ.ನಿ.ಪ್ರ ಶಿವಬಸವ ಮಹಾಸ್ವಾಮಿಗಳವರು ಚಾಲನೆ ನೀಡಿದರು. ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಎಲ್. ಅರಸಿದ್ಧಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 6 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮಹಾದಾಸೋಹದಲ್ಲಿ ಸಾವಿರಾರು ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸುವುದು ವಿಶೇಷತೆಯಾಗಿದೆ.
ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್ ಗಾರ್ಡನ್‌ನಲ್ಲಿ ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ ಹಾಗೂ ಪ್ರಸಾದ ಸ್ವೀಕರಿಸಲು ಹೆಚ್ಚು ವಿಶಾಲವಾದ ಸ್ಥಳಾವಕಾಶ ಕಲ್ಪಿಸಿದೆ. ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿದೆ. ಈ ವರ್ಷ ಸುಮಾರು 76 ಕೌಂಟರ್‌ಗಳನ್ನು ನಿರ್ಮಿಸಲಾಗಿದ್ದು, ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿ ಸಂಗ್ರಹಣಾ ಕೊಠಡಿಗಳಿವೆ.
ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ 04 ಪ್ರವೇಶ ದ್ವಾರಗಳು, 65 ಅಡಿಯ ಅನ್ನ ಸಂಗ್ರಹಣಾ ಕಟ್ಟೆ, ಇವುಗಳ ಜೊತೆಗೆ ಪ್ರತಿದಿನ ಪ್ರಸಾದದ ಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರ ಇಲಾಖೆಯ ಅಧಿಕಾರಿಗಳು, ಪೊಲೀಸರು ಇರುತ್ತಾರೆ. ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಒಳಾಂಗಣ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಾತ್ರಾ ಮಹೋತ್ಸವ ಪ್ರಾರಂಭದಿಂದ ಮುಕ್ತಾಯದವರೆಗೆ ಪ್ರಸಾದ ನಿಲಯದಲ್ಲಿ ಸುಮಾರು 25 ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಳ್ಳುವರು. ಜಾತ್ರೆಯ ಪ್ರಾರಂಭದಿಂದ ಮುಕ್ತಾಯದವರೆಗೆ ಸುಮಾರು 15ರಿಂದ 18 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ.



