ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರಲ್ಲದೆ, ಘಟನೆಯ ಕುರಿತು ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯಸ್ಸಿಗೆ ಬಂದ ಗಂಡು-ಹೆಣ್ಣು ಮದುವೆಯಾಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ವಯಸ್ಸಿಗೆ ಬಂದ ಹೆಣ್ಣು ತನ್ನ ಇಚ್ಛೆಗೆ ಅನುಗುಣವಾಗಿ ನಡೆಯಬಹುದು ಎಂದು ಹೇಳಿದ್ದಾರೆ. ವಯಸ್ಕ ಮಹಿಳೆ ತನ್ನ ಸಂಗಾತಿಯನ್ನು ಅವಳ ವಿವೇಕ, ಭರವಸೆ ಮತ್ತು ಇಷ್ಟಪಟ್ಟಿರುವ ವ್ಯಕ್ತಿಯನ್ನು ಮದುವೆಯಾಗಬಹುದು ಎಂದು ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್‌ನಲ್ಲಿ ವಿವರಿಸಿದ್ದಾರೆ. ಸ್ವ-ಇಚ್ಛೆಯಂತೆ ತಾನು ಇಷ್ಟಪಟ್ಟಿರುವ ವ್ಯಕ್ತಿಯನ್ನು ಮದುವೆಯಾಗುವುದು ಮೂಲಭೂತ ಹಕ್ಕಾಗಿದ್ದು, ಈ ಘಟನೆಯಲ್ಲಿ ಮೂಲಭೂತ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ. ಗರ್ಭಿಣಿ ಮಹಿಳೆಯನ್ನು ಅವರ ಕುಟುಂಬದವರೇ ಕೊಲೆ ಮಾಡಿರುವುದು ಅತ್ಯಂತ ಮೃಗೀಯ ಘಟನೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಸಚಿವರು, ಶಾಸಕರು ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದಾರೆ ಎಂದರು.
ಮಾನ್ಯಾ ಪ್ರಕರಣದಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸಬಾರದು. ಮಾನ್ಯಾ ಹೆಸರಿನಲ್ಲಿ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಕ್ರಮ ವಹಿಸಲಾಗುವುದು. ಸರ್ಕಾರದಿಂದ ಈಗಾಗಲೇ 5 ಲಕ್ಷ ರೂ ಹಣವನ್ನು ನೀಡಲಾಗಿದೆ ಎಂದು ತಿಳಿಸಿದರು. ಕುಟುಂಬದ 8 ಸದಸ್ಯರಿಗೆ ತಲಾ 2 ಲಕ್ಷದಂತೆ ಒಟ್ಟಾರೆ 16 ಲಕ್ಷ ರೂ ಮೊತ್ತದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ್, ಶಾಸಕರಾದ ಎನ್.ಎಚ್. ಕೋನರಡ್ಡಿ, ಎಫ್.ಎಚ್. ಜಕ್ಕಪ್ಪನವರ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಣದೀಪ ಡಿ, ಆಯುಕ್ತರಾದ ರಾಕೇಶ ಕುಮಾರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪವಿಭಾಗಾಧಿಕಾರಿ ಶಾಲಂ ಹುಸೇನ್,
ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಜೆ.ಬಿ. ಮಜ್ಜಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಡಾ. ರಾಮಚಂದ್ರ ಹೊಸಮನಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಗಳ ಮುಖಂಡರು ಉಪಸ್ಥಿತರಿದ್ದರು.
ಬಳಿಕ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕಾನಂದ ದೊಡ್ಡಮನಿ ಅವರ ತಾಯಿ ರೇಣವ್ವ ದೊಡ್ಡಮನಿಯವರ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಉತ್ತಮ ಚಿಕಿತ್ಸೆ, ಔಷಧಿ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.



