ಹುಬ್ಬಳ್ಳಿ: ಕಳೆದ ವರ್ಷ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಬಳಿಕ ನಡೆದ ಎನ್‌ಕೌಂಟರ್ ಪ್ರಕರಣದಿಂದ ದೇಶದ ಗಮನ ಸೆಳೆದಿದ್ದ ಹುಬ್ಬಳ್ಳಿಯಲ್ಲಿ ಇದೀಗ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ.
ನಗರದಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಅಪ್ರಾಪ್ತ ಬಾಲಕರು ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಅತ್ಯಾಚಾರ ಮಾಡಿದಷ್ಟೇ ಅಲ್ಲದೆ, ಕೃತ್ಯವನ್ನು ವೀಡಿಯೋ ಮಾಡಿಕೊಂಡು ಬಾಲಕಿಯನ್ನು ಬೆದರಿಸಿದ್ದ ಆರೋಪವೂ ಕೇಳಿಬಂದಿದೆ.
ಈ ಘಟನೆ ಹುಬ್ಬಳ್ಳಿ ನಗರದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ಮತ್ತು ಮೂವರು ಆರೋಪಿಗಳು ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಪರಸ್ಪರ ಪರಿಚಿತರಾಗಿದ್ದರು ಎನ್ನಲಾಗಿದೆ. ಆರೋಪಿಗಳಲ್ಲಿ ಒಬ್ಬನ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿಯನ್ನು ಕರೆದುಕೊಂಡು ಹೋಗಿ ಮೊದಲ ಬಾರಿ ಅತ್ಯಾಚಾರ ಮಾಡಿದ್ದು,
ಅದರ ವೀಡಿಯೋ ಮಾಡಿಕೊಂಡಿದ್ದಾನೆ. ನಂತರ ಈ ವಿಷಯವನ್ನು ತನ್ನ ಸ್ನೇಹಿತನಿಗೆ ಹೇಳಿದ್ದು, ಆತ ಮಾರನೇ ದಿನ ಬಾಲಕಿಯನ್ನು ಬೆದರಿಸಿ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ಮೂರನೇ ಬಾಲಕನಿಗೂ ವಿಷಯ ತಿಳಿಸಿದ್ದು, ಅವನು ಕೂಡ ಮತ್ತೊಂದು ದಿನ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.
ಮೂವರು ಆರೋಪಿಗಳು ವೀಡಿಯೋ ಇದೆ ಎಂದು ಬೆದರಿಕೆ ಹಾಕಿದ್ದರಿಂದ, ಬಾಲಕಿ ಈ ವಿಷಯವನ್ನು ಮನೆಯವರಿಗೆ ತಿಳಿಸಲು ಭಯಪಟ್ಟಿದ್ದಾಳೆ. ಆದರೆ ನಿನ್ನೆ ಬಾಲಕಿಗೆ ಹೊಟ್ಟೆ ನೋವು ಸೇರಿದಂತೆ ದೈಹಿಕ ತೊಂದರೆ ಕಾಣಿಸಿಕೊಂಡಾಗ ತಾಯಿ ವಿಚಾರಿಸಿದ್ದು, ಆಗ ನಡೆದ ಘಟನೆಯ ಬಗ್ಗೆ ಬಾಲಕಿ ವಿವರಿಸಿದ್ದಾಳೆ. ಇದರ ಹಿನ್ನೆಲೆ ಇಂದು ಬಾಲಕಿ ಮತ್ತು ಆಕೆಯ ತಾಯಿ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೂವರು ಆರೋಪಿಗಳು 14 ರಿಂದ 15 ವರ್ಷದ ಅಪ್ರಾಪ್ತ ಬಾಲಕರಾಗಿದ್ದು, ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪ್ರಸ್ತುತ ಆಕೆ ಗುಣಮುಖಳಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ವೇಳೆ, ಹುಬ್ಬಳ್ಳಿಯಲ್ಲಿ ಶಾಲಾ ಬಾಲಕಿಗೆ ಅಪ್ರಾಪ್ತರು ಕಿರುಕುಳ ನೀಡಿ ಹಲ್ಲೆ ಮಾಡಿದ ಮತ್ತೊಂದು ಪ್ರತ್ಯೇಕ ಪ್ರಕರಣವೂ ವರದಿಯಾಗಿದ್ದು, ಎರಡು ಪ್ರಕರಣಗಳಲ್ಲೂ ಆರೋಪಿಗಳೆಲ್ಲರೂ ಅಪ್ರಾಪ್ತರಾಗಿರುವುದು ನಗರದಲ್ಲಿ ಆತಂಕ ಮೂಡಿಸಿದೆ.



