ಬೆಂಗಳೂರು: ಮೊದಲೇ ಒಬ್ಬ ಪ್ರಯಾಣಿಕನಿಗೆ ವಿತರಿಸಿದ್ದ ಟಿಕೆಟ್ ಅನ್ನು ವಾಪಸ್ ಪಡೆದು ಮತ್ತೊಬ್ಬ ಪ್ರಯಾಣಿಕನಿಗೆ ಮರು ವಿತರಿಸಿ ಹಣ ಪಡೆಯುವ ನಿರ್ವಾಹಕನ ಕೃತ್ಯವು ಕಳ್ಳತನಕ್ಕೆ ಸಮಾನವಾಗಿದ್ದು, ಇದನ್ನು ದುರ್ನಡತೆಯೆಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಮೊದಲು ವಿತರಿಸಿದ್ದ ಟಿಕೆಟ್‌ಗಳನ್ನು ಮರು ಪಡೆದು ಐವರು ಪ್ರಯಾಣಿಕರಿಗೆ ಮತ್ತೆ ವಿತರಿಸಿ 18 ರೂ. ಹಣವನ್ನು ಜೇಬಿಗಿಳಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ನಿರ್ವಾಹಕ ನಾರಾಯಣನಿಗೆ ಬಿಎಂಟಿಸಿ ವಿಧಿಸಿದ್ದ ಎರಡು ವೇತನ ಹೆಚ್ಚಳ ತಡೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಈ ಸಂಬಂಧ ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕರು, ನಾರಾಯಣನಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿದ್ದ ಕೈಗಾರಿಕಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಎಂ. ಜೋತಿ ಅವರ ಪೀಠ ಈ ಆದೇಶ ನೀಡಿದೆ.
ಕಳ್ಳತನದ ದುಷ್ಕೃತ್ಯ ಸಾಬೀತಾಗಿದ್ದರೂ ಕೈಗಾರಿಕಾ ನ್ಯಾಯಾಲಯವು ಕೈಗಾರಿಕಾ ವ್ಯಾಜ್ಯ ಕಾಯ್ದೆ–1947ರ ಸೆಕ್ಷನ್ 11-ಎ ಅಡಿಯಲ್ಲಿ ವಿವೇಚನಾ ಅಧಿಕಾರ ಬಳಸಿಕೊಂಡು ಶಿಕ್ಷೆ ರದ್ದುಪಡಿಸಿರುವುದು ಕಾನೂನುಬದ್ಧವಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಕಳ್ಳತನದಂತಹ ಗಂಭೀರ ಆರೋಪಕ್ಕೆ ವಿಧಿಸಲಾದ ಶಿಕ್ಷೆ ಅತಿಯಾದದ್ದಲ್ಲ ಎಂದು ಹೇಳಿದ ನ್ಯಾಯಾಲಯ, ಇಂತಹ ದುಷ್ಕೃತ್ಯವು ನೌಕರನ ವಜಾಗೆ ಕಾರಣವಾಗುವಷ್ಟು ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
2013ರ ಜುಲೈ 2ರಂದು ಕೈಗಾರಿಕಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿ, ಬಿಎಂಟಿಸಿ ಶಿಸ್ತು ಪ್ರಾಧಿಕಾರ ವಿಧಿಸಿದ್ದ ಶಿಕ್ಷೆಯನ್ನು ಕಾಯಂಗೊಳಿಸಲಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.



