ಬೆಂಗಳೂರು: ಪತಿಗೆ ಉದ್ಯೋಗವಿಲ್ಲ ಅಥವಾ ಆದಾಯ ಕಡಿಮೆಯಿದೆ ಎಂಬ ಕಾರಣ ನೀಡಿ ಪತ್ನಿ ಹಾಗೂ ಮಗುವಿನ ನಿರ್ವಹಣೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಉದ್ಯೋಗವಿಲ್ಲದಿದ್ದರೆ ಕೆಲಸ ಹುಡುಕಬೇಕು, ಕಡಿಮೆ ಆದಾಯವಿದ್ದರೆ ಹೆಚ್ಚಿನ ಸಂಬಳದ ಉದ್ಯೋಗಕ್ಕಾಗಿ ಪ್ರಯತ್ನಿಸಬೇಕು. ಯಾವುದೇ ಪರಿಸ್ಥಿತಿಯಲ್ಲೂ ಪತ್ನಿ ಮತ್ತು ಮಗುವನ್ನು ಅತಂತ್ರ ಸ್ಥಿತಿಯಲ್ಲಿ ಬಿಡಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮೈಸೂರು ತಾಲೂಕಿನ ಹಳೇ ಉಂಡವಾಡಿ ನಿವಾಸಿ ಹರೀಶ್ ಆರ್. ಅವರು ತಮ್ಮ ವಿರುದ್ಧ ಕೆಳ ನ್ಯಾಯಾಲಯಗಳು ನೀಡಿದ್ದ ಜೀವನಾಂಶ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ನ ‘ಅಂಜು ಗಾರ್ಗ್’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಸಿಆರ್ಪಿಸಿ ಸೆಕ್ಷನ್ 125 ಸಾಮಾಜಿಕ ನ್ಯಾಯದ ಪ್ರಮುಖ ಅಂಶವಾಗಿದ್ದು, ಪತ್ನಿ ಹಾಗೂ ಮಕ್ಕಳನ್ನು ನಿರ್ಗತಿಕರನ್ನಾಗಿ ಬಿಡುವಂತಿಲ್ಲ ಎಂದು ಹೇಳಿದೆ. ಕೆಲಸವಿಲ್ಲ ಎಂಬುದು ಜೀವನಾಂಶ ನೀಡದಿರಲು ಸಮರ್ಥನೆ ಆಗುವುದಿಲ್ಲ. ಅಗತ್ಯವಿದ್ದರೆ ದೈಹಿಕ ಶ್ರಮ ವಹಿಸಿಯಾದರೂ ಹಣ ಸಂಪಾದಿಸಿ ಕುಟುಂಬವನ್ನು ನಿರ್ವಹಿಸುವುದು ಪತಿಯ ಕರ್ತವ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪತಿ ನ್ಯಾಯಾಲಯದ ಆದೇಶದಂತೆ ಜೀವನಾಂಶ ಪಾವತಿಸದೇ ಆದೇಶ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಅರ್ಜಿಯಲ್ಲಿ ಯಾವುದೇ ನ್ಯಾಯಸಮ್ಮತ ಅಂಶ ಇಲ್ಲ ಎಂದು ಹೇಳಿ ಅದನ್ನು ವಜಾಗೊಳಿಸಿದೆ. ಜೊತೆಗೆ, ವಿಚಾರಣಾ ನ್ಯಾಯಾಲಯ ನೀಡಿದ್ದ ಪತ್ನಿ ಹಾಗೂ ಮಗನಿಗೆ ಒಟ್ಟು ₹16,000 ಮಾಸಿಕ ಜೀವನಾಂಶ ನೀಡುವ ಆದೇಶವನ್ನು ಎತ್ತಿಹಿಡಿದಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರ ಹರೀಶ್ ಅವರು 2003ರ ಜೂನ್ 16ರಂದು ಸೌಮ್ಯ ಅವರನ್ನು ವಿವಾಹವಾಗಿದ್ದರು. ಬಳಿಕ ವೈಮನಸ್ಸು ಉಂಟಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದು, ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದರು.
ನಂತರ 2022ರಲ್ಲಿ ಪಾಂಡವಪುರ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಪತ್ನಿ ಸೌಮ್ಯ ಹಾಗೂ ಪುತ್ರ ಮನಮೋಹನ್ ಅವರಿಗೆ ತಲಾ ₹8,000ರಂತೆ ಒಟ್ಟು ₹16,000 ಮಾಸಿಕ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಮಂಡ್ಯ ಸೆಷನ್ಸ್ ನ್ಯಾಯಾಲಯವೂ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಪತಿಯ ಪರ ವಕೀಲರು, ಅರ್ಜಿದಾರರು ಪ್ರಸ್ತುತ ನಿರುದ್ಯೋಗಿಯಾಗಿದ್ದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ತಿಂಗಳಿಗೆ ₹16,000 ಜೀವನಾಂಶ ನೀಡುವ ಸ್ಥಿತಿಯಲ್ಲಿ ಇಲ್ಲ. ಪತ್ನಿ ಕಾನೂನು ಪದವೀಧರೆಯಾಗಿದ್ದು ವಕೀಲೆಯಾಗಿ ಹೆಚ್ಚು ಸಂಪಾದಿಸುವ ಸಾಮರ್ಥ್ಯ ಹೊಂದಿರುವುದರಿಂದ ಜೀವನಾಂಶ ನೀಡುವ ಆದೇಶ ರದ್ದುಗೊಳಿಸಬೇಕು ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಪತ್ನಿಯ ಪರ ವಕೀಲರು, ಅನಾರೋಗ್ಯದ ಕಾರಣದಿಂದ ವಕೀಲ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೆಳ ನ್ಯಾಯಾಲಯಗಳ ಆದೇಶ ನ್ಯಾಯಸಮ್ಮತವಾಗಿದ್ದು, ಪತಿಯ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಮಗನ ಪರ ವಕೀಲರು, 2022ರ ಫೆಬ್ರವರಿ 3ರಂದು ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಈವರೆಗೆ ಯಾವುದೇ ಹಣ ಪಾವತಿಸಿಲ್ಲ. ಸುಮಾರು ₹21 ಲಕ್ಷ ಜೀವನಾಂಶ ಬಾಕಿ ಉಳಿದಿದ್ದು, ಅದನ್ನು ಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠದ ಗಮನಕ್ಕೆ ತಂದರು.



