ಚಿಕ್ಕೋಡಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗರಾಜ ಕರೆಣ್ಣವರ್ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ವಿರುದ್ಧ ಅಧಿಕೃತವಾಗಿ ಎಫ್ಐಆರ್ ದಾಖಲಾಗಿದೆ.
ಹಲ್ಲೆಯಿಂದ ಗಾಯಗೊಂಡ ನಿಂಗರಾಜ ಕರೆಣ್ಣವರ್ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲೇ ಅಥಣಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶಾಸಕ ಲಕ್ಷ್ಮಣ್ ಸವದಿ, ಪುತ್ರ ಚಿದಾನಂದ ಸವದಿ ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ನಿಂಗರಾಜ ಕರೆಣ್ಣವರ್ ನೀಡಿರುವ ದೂರಿನ ಪ್ರಕಾರ, “ಶಾಸಕ ಲಕ್ಷ್ಮಣ್ ಸವದಿ ಅವರು ಮನೆಗೆ ಕರೆಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಬಳಿಕ ಅವರೇ ಕಪಾಳಕ್ಕೆ ಹೊಡೆದರು. ಪುತ್ರ ಚಿದಾನಂದ ಸವದಿ ಸೊಂಟಕ್ಕೆ ಬಲವಾಗಿ ಒದ್ದರು. ನೆಲಕ್ಕೆ ಬಿದ್ದ ನನ್ನ ಮೇಲೆ 7 ರಿಂದ 8 ಜನರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದರು” ಎಂದು ಗಂಭೀರ ಆರೋಪ ಮಾಡಲಾಗಿದೆ.
ಈ ಸಂಬಂಧ ಅಕ್ರಮ ಗುಂಪು ಸೇರಿ ಹಲ್ಲೆ, ಜೀವ ಬೆದರಿಕೆ, ಮಾರಣಾಂತಿಕ ಹಲ್ಲೆ ಹಾಗೂ ನಿಂದನೆ ಆರೋಪಗಳಡಿ ಬಿಎನ್ಎಸ್ ಕಾಯ್ದೆಯ 189(2), 191(2), 115(2), 351(2), 352(2) ಮತ್ತು 190 ಕಲಂಗಳನ್ನು ಅಳವಡಿಸಲಾಗಿದೆ.
ಪ್ರಕರಣದ ಬೆನ್ನಲ್ಲೇ ಶಾಸಕ ಲಕ್ಷ್ಮಣ್ ಸವದಿ ವಿರುದ್ಧ ದೊಡ್ಡ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಅವರ ಬೆಂಬಲಿಗರು ಇಂದು ಅಥಣಿ ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.



