ಬೆಂಗಳೂರು:- ಆಸ್ತಿಗಾಗಿ ಸ್ವಂತ ಅಕ್ಕನನ್ನೇ ದೊಣ್ಣೆಯಿಂದ ಹೊಡೆದು ತಮ್ಮ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಈ ಘಟನೆ ಡಿಸೆಂಬರ್ 12 ರಂದು ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೆಂಕಟೇಶ್ ಅಕ್ಕನಿಗೆ ಹಲ್ಲೆ ಮಾಡಿದ ಪಾಪಿ ತಮ್ಮ. ತಂಗಮಣಿ ತಮ್ಮನಿಂದಲೇ ಹಲ್ಲೆಗೆ ಒಳಗಾದ ಅಕ್ಕ. ಆರೋಗ್ಯ ಹದಗೆಟ್ಟು ಹಾಸಿಗೆ ಪಾಲಾಗಿದ್ದ ಅಪ್ಪನನ್ನು ನೋಡಲು ತಂಗಮಣಿ ತವರಿಗೆ ಬಂದಿದ್ದರು.
ಈ ವೇಳೆ ಆಸ್ತಿ ಕೇಳಲು ಬಂದಿದ್ದಾಳೆ ಎಂದು ತಿಳಿದ ತಮ್ಮ, ಅಕ್ಕನಿಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಗೆ ತಮ್ಮನ ಪತ್ನಿ ಕೂಡ ಸಾಥ್ ಕೊಟ್ಟಿದ್ದಾಳೆ. ಘಟನೆ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ವೆಂಕಟೇಶ್ ಹಾಗೂ ಆತನ ಪತ್ನಿ ಮೇಲೆ FIR ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



