ಹುಬ್ಬಳ್ಳಿ: ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ದೇಶವ್ಯಾಪಿ ಟೀಕೆಗೆ ಗುರಿಯಾದ ಬಳಿಕ ಕೊನೆಗೂ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ ಒತ್ತಾಯ ಹಾಗೂ ಕಾಂಗ್ರೆಸ್ ಪ್ರತಿರೋಧದ ನಡುವೆಯೇ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ ಅವರನ್ನು ಪೊಲೀಸರು ವಶಕ್ಕೆ ಪಡೆದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಜೆಪಿ ಮಹಿಳಾ ಕಾರ್ಯಕರ್ತೆ ಸುಜಾತಾ ಹಂಡಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಳೆದು ತೂಗಿ ಕ್ರಮಕ್ಕೆ ಮುಂದಾಗಿರುವ ಕಮಿಷನರ್, ಕೇಶ್ವಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್.ಕೆ. ಹಟ್ಟಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇನ್ಸ್ಪೆಕ್ಟರ್ ಹಟ್ಟಿ ಅವರನ್ನು ಕೇಶ್ವಾಪುರ ಠಾಣೆಯಿಂದ ಕಮಿಷನರ್ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ ಘಂಟಿಕೇರಿ ಠಾಣೆಯ ಇನ್ಸ್ಪೆಕ್ಟರ್ ಜಾದವ್ ಅವರಿಗೆ ಕೇಶ್ವಾಪುರ ಠಾಣೆಯ ಹೆಚ್ಚುವರಿ ಪ್ರಭಾರಿಯಾಗಿ ಜವಾಬ್ದಾರಿ ನೀಡಲಾಗಿದೆ.
ವಿವಸ್ತ್ರಗೊಳಿಸಿ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಲಾಗಿದೆ ಎಂಬ ಆರೋಪ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಇಷ್ಟಾದರೂ ಆರಂಭದಲ್ಲಿ ತಮ್ಮ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದ್ದ ಕಮಿಷನರ್ ಎನ್. ಶಶಿಕುಮಾರ್, ಇದೀಗ ಪ್ರಕರಣದ ಗಂಭೀರತೆ ಅರಿತು ಕ್ರಮಕ್ಕೆ ಮುಂದಾದಂತೆ ಕಾಣುತ್ತಿದೆ.
ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಸಿಇಎನ್ ವಿಭಾಗದ ಎಸಿಪಿ ಶಿವರಾಜ್ ಕಟಕಬಾವಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಸತ್ಯಾಸತ್ಯತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ತಂಡಕ್ಕೆ ಸೂಚಿಸಲಾಗಿದೆ.
ಇನ್ನೊಂದೆಡೆ, ವಶಕ್ಕೆ ಪಡೆಯುವ ವೇಳೆ ಅನಾರೋಗ್ಯಕ್ಕೊಳಗಾದ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಹಿನ್ನೆಲೆ ವಶಕ್ಕೆ ಪಡೆಯುವ ಪ್ರಕ್ರಿಯೆ ತಡವಾಗುವ ಸಾಧ್ಯತೆ ಇದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಇಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಾಲಿ–ಮಾಜಿ ಶಾಸಕರು, ಎಂಎಲ್‌ಸಿಗಳು ಮೆರವಣಿಗೆ ನಡೆಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲಾನ್ ಮಾಡಿದ್ದಾರೆ.



