ಹುಬ್ಬಳ್ಳಿ: “ನಾನು ಕೈಮುಗಿದು ಕೇಳಿಕೊಂಡೆ… ಆದರೆ ನನ್ನನ್ನು ಬಿಡಲಿಲ್ಲ” — ಇದು ಸುಜಾತಾ ಹಂಡಿ ಪ್ರಕರಣದಲ್ಲಿ ಹಲ್ಲೆ ಮತ್ತು ಅಪಹರಣಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸುವ ಕೃಷಿಕ ಹಾಗೂ ಕನ್ನಡ ಪರ ಹೋರಾಟಗಾರ ತುಕಾರಾಂನ ಮಾಧ್ಯಮಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.
2023ರಲ್ಲಿ ಫೋನ್ ಮೂಲಕ ಪರಿಚಯವಾದ ಮಹಿಳೆ, ಮಗುವಿನ ಹೃದಯ ಚಿಕಿತ್ಸೆಗೆ 50 ಸಾವಿರ ರೂ. ಬೇಕೆಂದು ಕೇಳಿದ್ದಾಳೆ. ಸಹಾಯ ಮಾಡುವ ಉದ್ದೇಶದಿಂದ ಎಸ್ಡಿಎಂ ಆಸ್ಪತ್ರೆಗೆ ಹೋದಾಗ, ಪಕ್ಕದ ಪೆಟ್ರೋಲ್ ಬಂಕ್ಗೆ ಬರಲು ಹೇಳಿ ಅಲ್ಲಿ ಮೂವರು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಉಣಕಲ್ ಕಡೆ ಕರೆದೊಯ್ದರು ಎಂದು ತುಕಾರಾಂ ವಿವರಿಸಿದರು.
ಅಲ್ಲಿ 2 ಲಕ್ಷ ರೂ. ಹಣ ಮತ್ತು ಒಡವೆ ಕಸಿದುಕೊಂಡು, ಹಳಿಯಾಳ ಬಳಿಯ ಮನೆಯಲ್ಲಿ ಕೂಡಿ ಹಾಕಿ ದಿನಗಳ ಕಾಲ ಚಿತ್ರಹಿಂಸೆ ನೀಡಿದರು. ಕುಡಿದು ಬಂದು ಹಣ ನೀಡುವಂತೆ ಒತ್ತಡ ಹೇರಿದರು. ಸುಜಾತಾ ಹಂಡಿ ಬಂದು ಧಮಕಿ ಹಾಕಿದ್ದು, ಮಹೇಶ್ ಟೆಂಗಿನಕಾಯಿ ನನ್ನ ಬೆನ್ನಿಗಿದ್ದಾರೆ ಎಂದು ಬೆದರಿಸಿದರು ಎಂದು ಆರೋಪಿಸಿದರು.
ಯಲ್ಲಾಪುರದ ಕಾಡು, ದಾಂಡೇಲಿ, ಬ್ಯಾಹಟ್ಟಿ, ಅಣ್ಣಿಗೇರಿ ಸೇರಿದಂತೆ ಹಲವು ಕಡೆಗಳಿಗೆ ಕರೆದೊಯ್ದು ಹಣಕ್ಕಾಗಿ ಹಿಂಸಿಸಿದರು. ನನ್ನ ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡು ಸಂಬಂಧಿಕರಿಂದ 1.50 ಲಕ್ಷ ರೂ. ಪಡೆದುಕೊಂಡರು. ಒಟ್ಟಾರೆ 6 ಲಕ್ಷ ರೂ. ಕಸಿದುಕೊಂಡ ಬಳಿಕ ನನ್ನನ್ನು ಬಿಟ್ಟುಬಿಟ್ಟರು ಎಂದು ತುಕಾರಾಂ ಹೇಳಿದರು.
ಈ ಘಟನೆ ನನ್ನನ್ನು ಆತ್ಮಹತ್ಯೆ ಯೋಚನೆಗೂ ತಳ್ಳಿತ್ತು. ಆದರೆ ಹಲವರು ನನಗೆ ಧೈರ್ಯ ತುಂಬಿದರು. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಬೇಕು. ನನಗೆ ನ್ಯಾಯ ಒದಗಿಸಬೇಕು ಎಂದು ತುಕಾರಾಂ ಕಣ್ಣೀರಿಟ್ಟರು.



