ವೇದಿಕೆ ಹಂಚಿಕೊಂಡರೂ ಪರಸ್ಪರರತ್ತ ತಿರುಗಿ ನೋಡದ ಮಾಜಿ ಸಿಎಂ ಬಿಎಸ್ ವೈ, ಹಾಲಿ ಸಿಎಂ ಬೊಮ್ಮಾಯಿ
ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ
ಗುರು ಶಿಷ್ಯರಂತಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೋಟೆನಾಡಲ್ಲಿ ನಡೆದ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರರತ್ತ ತಿರುಗಿ ನೋಡದೆ ಅಂತರ ಕಾಯ್ದುಕೊಂಡಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಚಿತ್ರದುರ್ಗದ ಮುರುಘಾ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ನಡೆದ ಗುರುವಂದನ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಎಸ್ ವೈ ಹಾಗೂ ಸಿಎಂ ಬೊಮ್ಮಾಯಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಮುಗಿಯುವವರೆಗೂ ಪರಸ್ಪರ ಮಾತನಾಡುವುದು ದೂರದ ಮಾತು ಒಬ್ಬರು ಮತ್ತೊಬ್ಬರತ್ತ ತಿರುಗಿ ನೋಡದಿರುವುದು ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡಿಸಿದೆ.
ಬೊಮ್ಮಾಯಿ ಅವರು ಜನತಾ ಪರಿವಾರ ತೊರೆದು ಬಿಜೆಪಿ ಸೇರಿದಾಗಿನಿಂದ ಬಿಎಸ್ ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕವಂತೂ ಇಬ್ಬರ ನಡುವೆ ಅತ್ಯಂತ ಆತ್ಮೀಯ ಸಂಬಂಧ ಬೆಳೆದಿತ್ತು. ಸಿಎಂ ಬಳಿಕ ಸಂಪುಟದ ಎರಡನೇ ಸ್ಥಾನ ಹೊಂದಿರುವ ಗೃಹಖಾತೆ ನೀಡಿ ಬೊಮ್ಮಾಯಿ ಮೇಲೆ ಅಕ್ಕರೆ ತೋರಿಸಿದ್ದರು.
ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಬಸವರಾಜ ಬೊಮ್ಮಾಯಿ ಬಿಎಸ್ ವೈ ನೆರಳಿನಂತೆ ಗುರುತಿಸಿಕೊಂಡಿದ್ದರು.
ಆದರೆ, ಹೈಕಮಾಂಡ್ ಸೂಚನೆ ಪಾಲಿಸಿ ಬಿಎಸ್ ವೈ ಸಿಎಂ ಗದ್ದುಗೆಯಿಂದ ಕೆಳಗಿಳಿದ ಬಳಿಕ ಮೂಲ ಬಿಜೆಪಿಯ ಘಟಾನುಘಟಿ ಮುಖಂಡರನ್ನೇ ಹಿಂದಿಕ್ಕಿ ಬೊಮ್ಮಾಯಿ ಅವರು ಸಿಎಂ ಆಗಿದ್ದು, ಬಿಎಸ್ ವೈ ಕೃಪಾಶೀರ್ವಾದದಿಂದಲೇ ಎಂಬ ಮಾತುಗಳೂ ಸಹ ಕೇಳಿಬಂದಿದ್ದವು.
ಆದರೆ, ನಂತರ ನಡೆದ ಕೆಲ ಘಟನೆಗಳು ಇಬ್ಬರ ಮಧ್ಯೆ ಮುನಿಸು ಉಂಟಾಗಲು ಕಾರಣವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಮೊದಲನೆಯದಾಗಿ ಪುತ್ರ ವಿಜಯೇಂದ್ರನಿಗೆ ಸರ್ಕಾರದಲ್ಲೂ ಸ್ಥಾನ ಸಿಗದೆ ಪಕ್ಷದಲ್ಲೂ ಪ್ರಾಧಾನ್ಯತೆ ಕಡಿಮೆಯಾಗಿರುವುದು, ಈಚೆಗೆ ತಮ್ಮ ಆಪ್ತರ ಮೇಲೆ ನಡೆದ ಐಟಿ ರೇಡ್ ಬಿಎಸ್ ವೈ ರನ್ನು ಘಾಸಿಗೊಳಿಸಿದ್ದು, ಹೀಗಾಗಿಯೇ ಸಿಎಂ ಬೊಮ್ಮಾಯಿ ಜೊತೆಗೆ ಅಂತರ ಕಾಯ್ದುಕೊಂಡಿರಬಹುದು ಎಂಬ ಚರ್ಚೆಗಳು ಕೇಳಿಬಂದಿವೆ.