ಬೆಂಗಳೂರು: ಖಾಸಗಿ ಕಂಪನಿಗಳು ಕನ್ನಡ ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕನ್ನಡಿಗರನ್ನು ಕಡೆಗಣಿಸುತ್ತಿವೆ ಎಂಬ ಆರೋಪಗಳು ಮತ್ತೆ ಕೇಳಿಬಂದಿವೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಎಂಬ ಖಾಸಗಿ ಕಂಪನಿಯೊಂದು ನೌಕ್ರಿ ಡಾಟ್ ಕಾಮ್ನಲ್ಲಿ ಪ್ರಕಟಿಸಿದ ನೇಮಕಾತಿ ಜಾಹೀರಾತು ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಂಪನಿಯು ಮಾನವ ಸಂಪನ್ಮೂಲ (HR) ಹುದ್ದೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಿದ್ದು, “NON KANNADA HR” ಅಭ್ಯರ್ಥಿಗಳಿಗೆ ಆದ್ಯತೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿರುವುದು ಕನ್ನಡಿಗರಲ್ಲಿ ಆಕ್ರೋಶ ಹುಟ್ಟಿಸಿದೆ. ಈ ಜಾಹೀರಾತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.
ಕನ್ನಡ ನಾಡಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಕಂಪನಿಗಳು ಉದ್ಯೋಗದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದು ಜನರ ಒತ್ತಾಯವಾಗಿದೆ. ಕನ್ನಡ ಭಾಷೆ ಗೊತ್ತಿಲ್ಲದವರಿಗೆ ಆದ್ಯತೆ ನೀಡಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿ ಕನ್ನಡ ಪರ ಸಂಘಟನೆಗಳೂ ಪ್ರತಿಕ್ರಿಯಿಸಿದ್ದು, ಕನ್ನಡ ನೆಲದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಆರೋಪಿಸಿವೆ. ಕಂಪನಿಯು ಕೂಡಲೇ ಕ್ಷಮೆ ಕೇಳಬೇಕು ಹಾಗೂ ವಿವಾದಾತ್ಮಕ ಜಾಹೀರಾತನ್ನು ವಾಪಸ್ ಪಡೆಯಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.



