ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದಿನ ಸಬರಮತಿ ಆಶ್ರಮದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2026ದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಜರ್ಮನ್ ಚಾನ್ಸೆಲರ್ ಫೆಡ್ರಿಕ್ ಮೆರ್ಜ್ ಅವರೊಂದಿಗೆ ಉತ್ಸವದಲ್ಲಿ ಗಾಳಿಪಟ ಹಾರಿಸಿದ್ದಾರೆ.
ಆಶ್ರಮಕ್ಕೆ ಆಗಮಿಸಿದ ಬಳಿಕ ಇಬ್ಬರೂ ನಾಯಕರು ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಪುಷ್ಪ ನಮನ ಸಲ್ಲಿಸಿದರು. ಮೆರ್ಜ್ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿಯೂ ಸಹಿ ಹಾಕಿದರು. ನಂತರ ಸಬರಮತಿ ನದಿ ದಂಡೆಯಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ, ವಾತಾವರಣದ ಮೋಜನ್ನು ಅನುಭವಿಸಿದರು.
ಗುಜರಾತ್ ರಾಜ್ಯದ ಗೌರವಾನ್ವಿತ ರಾಜ್ಯಪಾಲ ಅಚಾರ್ಯ ದೇವವ್ರತ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಅವರನ್ನು ಬರಮಾಡಿಕೊಂಡಿದ್ದರು. ಈ ವೇಳೆ, ಭಾರತ ಮತ್ತು ಜರ್ಮನಿ ನಡುವೆ ರಾಜತಾಂತ್ರಿಕ ಸಂಬಂಧಗಳ 75 ವರ್ಷಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳು ಆಚರಿಸಲಾಗುತ್ತಿದ್ದು, ಇದರೊಂದಿಗೆ ಮೆರ್ಜ್ ಭಾರತ ಭೇಟಿ ವಿಶೇಷತೆಯನ್ನು ಪಡೆದಿದೆ.



