ಹಾವೇರಿ: ಕಳೆದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸಂಕಷ್ಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನೇ ದಿನೇ ಹೊಸ ಸಮಸ್ಯೆಗಳು ಎದುರಾಗುತ್ತಿದ್ದು, ಮೆಕ್ಕೆಜೋಳ ಬೆಳೆಗಾರರು ತೀವ್ರ ಆತಂಕದಲ್ಲಿದ್ದಾರೆ.
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರು ನಡೆಸಿದ ಹೋರಾಟದ ಬಳಿಕ ಸರ್ಕಾರ ಪ್ರತಿ ರೈತನಿಂದ 12 ಕ್ವಿಂಟಾಲ್ ಖರೀದಿ ಘೋಷಿಸಿ, ನಂತರ 20 ಕ್ವಿಂಟಾಲ್ ಹಾಗೂ ಕೊನೆಗೆ 50 ಕ್ವಿಂಟಾಲ್‌ವರೆಗೆ ಖರೀದಿ ಪ್ರಮಾಣ ಹೆಚ್ಚಿಸಿತ್ತು. ಆದರೆ ಬ್ಯಾಡಗಿ ಪಟ್ಟಣದ ಎಪಿಎಂಸಿಯಲ್ಲಿರುವ ಕೆಎಂಎಫ್ ಖರೀದಿ ಕೇಂದ್ರದಲ್ಲಿ ಖರೀದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ರಿಜೆಕ್ಟ್ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ನೋಂದಣಿ ವೇಳೆ ಸ್ಯಾಂಪಲ್ ಒಪ್ಪಿಗೆಯಾದರೂ, ನಂತರ ತೇವಾಂಶ ಅಧಿಕ, ಫಂಗಸ್ ಇದೆ ಎಂಬ ಕಾರಣ ನೀಡಿ ಮೆಕ್ಕೆಜೋಳವನ್ನು ಖರೀದಿ ಮಾಡದೆ ಹಿಂದಿರುಗಿಸಲಾಗುತ್ತಿದೆ. ಪರಿಣಾಮವಾಗಿ ರೈತರು ಟ್ರಾಕ್ಟರ್‌ಗಳಲ್ಲೇ ಮಲಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಊಟ, ವಸತಿ, ಸಾರಿಗೆ ಖರ್ಚು ಹೆಚ್ಚಿದ್ದು, ಆರ್ಥಿಕ ಸಂಕಷ್ಟ ಗಂಭೀರವಾಗಿದೆ ಎಂದು ರೈತರು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಸುಮಾರು 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ಕೆಲ ರೈತರು ಮಾತ್ರ ಬೆಳೆ ಮಾರಾಟ ಮಾಡಿ ಸಾಲ ತೀರಿಸಿದ್ದಾರೆ. ಇನ್ನೂ ಅನೇಕ ರೈತರು ಬೆಳೆ ಮಾರಾಟ ಮಾಡಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ.
ಮಾರುಕಟ್ಟೆಗೆ ಬೆಳೆ ತಂದ ಬಳಿಕ ನಿಯಮಗಳನ್ನು ಹೇಳಿ ನಿರಾಕರಿಸುವುದು ಅನ್ಯಾಯ ಎಂದು ರೈತರು ಆರೋಪಿಸಿದ್ದು, ಖರೀದಿ ಕೇಂದ್ರಗಳಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.



