ಕಾರವಾರ: ಶೌಚಾಲಯದ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ–63ರ ಪಕ್ಕದಲ್ಲೇ ಬ್ಯಾಂಕ್ ಆಫ್ ಬರೋಡಾ ಶಾಖೆ ಇದೆ. ಶೌಚಾಲಯ ಪ್ರದೇಶವನ್ನು ಹೊರತುಪಡಿಸಿ ಇತರೆ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳಿರುವುದನ್ನು ತಿಳಿದ ಖದೀಮರು, ಶೌಚಾಲಯದ ಹಿಂಭಾಗದ ಗೋಡೆಯನ್ನು ಕೊರೆದು ಬ್ಯಾಂಕ್ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಬ್ಯಾಂಕ್‌ನ ಸ್ಟ್ರಾಂಗ್ ರೂಮ್ ಗೋಡೆ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದೆ ಹೋದ ಕಾರಣ ಕಳ್ಳರು ಯಾವುದೇ ಹಣ ಅಥವಾ ವಸ್ತುಗಳನ್ನು ಕಳ್ಳತನ ಮಾಡದೇ ಖಾಲಿ ಕೈಯಲ್ಲಿ ಹಿಂತಿರುಗಿದ್ದಾರೆ.
ಘಟನೆಯ ಮಾಹಿತಿ ಪಡೆದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪನ್ ಎಂ.ಎನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಹಾಗೂ ತಜ್ಞರ ತಂಡದಿಂದ ಪರಿಶೋಧನೆ ಕಾರ್ಯ ಕೈಗೊಳ್ಳಲಾಗಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



