ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದಾಳಿಗಳು ಮುಂದುವರಿದಿದೆ.
ದಕ್ಷಿಣ ಬಾಂಗ್ಲದ ಫೆನಿ ಜಿಲ್ಲೆಯ ಧಗನ್ಭುಯಾನ್ನಲ್ಲಿ ಅಪರಿಚಿತ ದುಷ್ಕರ್ಮಿಗಳು 28 ವರ್ಷದ ಆಟೋ ಚಾಲಕನನ್ನು ಇರಿದು ಹತ್ಯೆ ಮಾಡಿದ್ದಾರೆ. ಮೃತನನ್ನು ಸಮೀರ್ ಕುಮಾರ್ ದಾಸ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸಮೀರ್‌ನನ್ನು ಕೊಂದು, ಆತನ ಆಟೋರಿಕ್ಷಾವನ್ನೂ ಕಳವು ಮಾಡಲಾಗಿದೆ.
ಕುಟುಂಬದವರ ಮಾಹಿತಿ ಪ್ರಕಾರ, ಭಾನುವಾರ ಸಂಜೆ ಸುಮಾರು 7 ಗಂಟೆಗೆ ಸಮೀರ್ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟಿದ್ದರು. ತಡರಾತ್ರಿಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬದವರು ಹುಡುಕಾಟ ಆರಂಭಿಸಿದ್ದರು. ಬಳಿಕ ಸೋಮವಾರ ಬೆಳಗಿನ ಜಾವ ಸುಮಾರು 2 ಗಂಟೆಗೆ ಜಗತ್ಪುರ ಗ್ರಾಮದ ಹೊಲವೊಂದರಲ್ಲಿ ಸ್ಥಳೀಯರು ಸಮೀರ್‌ನ ಶವವನ್ನು ಪತ್ತೆ ಮಾಡಿದ್ದಾರೆ.
ದಗನ್‌ಭುಯಾನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, ಹತ್ಯೆಗೆ ಮನೆಯಲ್ಲಿ ತಯಾರಿಸಿದ ಹರಿತವಾದ ಆಯುಧಗಳನ್ನು ಬಳಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಪೂರ್ವ ಯೋಜಿತವಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಇದು ಕಳೆದ 23 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಳನೇ ಹಿಂದೂ ಹತ್ಯೆ ಎನ್ನಲಾಗಿದೆ.



