ಬೆಂಗಳೂರು: ಮೊದಲ ಪತ್ನಿಗೆ ವಂಚನೆ ಮಾಡಿ ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜೆಡ್ರೆಲಾ ಜಬ್ ಆರೂಪ್ ಅಲಿಯಾಸ್ ಜಾಕೂಬ್ ಎಂದು ಗುರುತಿಸಲಾಗಿದೆ. ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಆರೋಪಿಯು ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಪತ್ನಿ ಖಾಸಗಿ ಸಂಸ್ಥೆಯೊಂದರಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಟೆಕ್ಕಿಯಾಗಿದ್ದ ಪತಿಗೆ ಕೆಲಸ ಇಲ್ಲದ ಹಿನ್ನೆಲೆ, ಲಕ್ಷಾಂತರ ರೂ. ಸಂಬಳ ಬರುತ್ತಿದ್ದ ತನ್ನ ಉದ್ಯೋಗವನ್ನು ಪತ್ನಿ ತ್ಯಜಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಒಂದು ಮಗುವಾದ ಬಳಿಕ ಪತ್ನಿಗೆ ಜಾತಿ ನಿಂದನೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರೋಪಿ ಆರಂಭಿಸಿದ್ದಾನೆ. ಅಲ್ಲದೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರುವ ಜೊತೆಗೆ ಹಲ್ಲೆ ನಡೆಸಿದ್ದಾನೆ ಎಂದು ಪತ್ನಿ ದೂರಿದ್ದಾರೆ. ಕಿರುಕುಳ ತಾಳಲಾರದೇ ಪತ್ನಿ, ಪತಿಯ ವಿರುದ್ಧ ಅಟ್ರಾಸಿಟಿ ಹಾಗೂ ಹಲ್ಲೆ ಪ್ರಕರಣ ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಪ್ರೇಯಸಿಯ ಮನೆಯಲ್ಲಿ ಅಡಗಿದ್ದ ಮಾಹಿತಿ ಪಡೆದು ಅಲ್ಲಿ ದಾಳಿ ನಡೆಸಿ ಜಾಕೂಬ್‌ನನ್ನು ಬಂಧಿಸಿದ್ದಾರೆ.
ಡಿಸಿಆರ್‌ಇ ಪೊಲೀಸ್ ಠಾಣೆ ಜಾರಿಗೆ ಬಂದ ಬಳಿಕ ಕರ್ನಾಟಕದಲ್ಲಿ ಅಟ್ರಾಸಿಟಿ ಕಾಯ್ದೆಯಡಿ ನಡೆದ ಮೊದಲ ಬಂಧನ ಪ್ರಕರಣ ಇದಾಗಿದೆ.
ಏನಿದು ಡಿಸಿಆರ್‌ಇ?
ಡಿಸಿಆರ್‌ಇ ಎಂದರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಜಾತಿ ನಿಂದನೆ, ದೌರ್ಜನ್ಯ ಮತ್ತು ತಾರತಮ್ಯ ಪ್ರಕರಣಗಳ ತನಿಖೆ ನಡೆಸುವ ವಿಶೇಷ ಪೊಲೀಸ್ ಘಟಕವಾಗಿದೆ.



