ವಿಜಯಸಾಕ್ಷಿ ಸುದ್ದಿ, ಧಾರವಾಡ: ಹಂದಿಗನೂರ ದೇಶಗತಿ ಮನೆತನ ಉತ್ತರ ಕರ್ನಾಟಕದಲ್ಲಿ ತನ್ನದೇ ಆದ ಇತಿಹಾಸ ಹಾಗೂ ಪರಂಪರೆಯಯುಳ್ಳ ಮನೆತನವಾಗಿದೆ. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ ದಿ. ಆರ್.ಬಿ. ಮಾಮಲೇದೇಸಾಯಿ ಯಾವುದೇ ಆಡಂಬರವಿಲ್ಲದ, ಸೌಜನ್ಯದ, ಮೌಲ್ಯಾಧಾರಿತ ಜೀವನ ನಡೆಸಿದ ವ್ಯಕ್ತಿಗಳಾಗಿದ್ದರು. ಅವರ ಜೀವನದ ಯಶೋಗಾಥೆ ಇಂದಿನ ಪೀಳಿಗೆಗೆ ಅನುಕರಣೀಯ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲ್ಪಟ್ಟ ಹಾವೇರಿ ಜಿಲ್ಲೆಯ ಹಂದಿಗನೂರ ದೇಶಗತಿ ಮನೆತನದ ದಿ. ಆರ್.ಬಿ. ಮಾಮಲೇದೇಸಾಯಿ ಅವರ ದತ್ತಿ ಸಂಸ್ಮರಣೆ ಹಾಗೂ ಡಾ. ಮಲ್ಲಿಕಾರ್ಜುನ ಪಾಟೀಲ ಬರೆದ ಆರ್.ಬಿ. ಮಾಮಲೇದೇಸಾಯಿ ಜೀವನ ಸಾಧನೆ ಕೃತಿ ಲೋಕಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಸರ್ಕಾರ ರೈತರ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಪ್ರಕರಣಗಳು ಇತ್ಯರ್ಥವಾಗಲು ಸಿ.ಪಿ.ಸಿ ಕಾನೂನು ಮೂಲಕ ತಿದ್ದುಪಡಿ ತಂದಿದೆ. ದಿ. ಆರ್.ಬಿ. ಮಾಮಲೇದೇಸಾಯಿಯವರ ಜೀವನ ಸಾಧನೆ ಹಾಗೂ ಕೃಷಿ ಸಮಸ್ಯೆಗಳ ಪರಿಹಾರ ಕುರಿತು ದತ್ತಿ ಮೂಲಕ ಅವರ ಕುಟುಂಬದವರು ಪ್ರತಿ ವರ್ಷ ಮಾಡಲು ನಿರ್ಧರಿಸಿದ್ದು ಅಭಿನಂದನೀಯ ಎಂದರು.
ಮಾಜಿ ಶಾಸಕರಾದ ಅಮೃತ ದೇಸಾಯಿ ಮಾತನಾಡಿ, ದಿ. ಆರ್.ಬಿ. ಮಾಮಲೇದೇಸಾಯಿ ಅವರ 14 ಜನ ಮೊಮ್ಮಕ್ಕಳಲ್ಲಿ ನಾನೂ ಒಬ್ಬ. ನಮ್ಮ ಅಜ್ಜನವರೇ ಸರಳ ಬದುಕಿನ ಪಾಠ ಹೇಳಿ ನಮಗೆಲ್ಲ ಸಂಸ್ಕಾರ ನೀಡಿದ್ದರೆಂದರು.
ಅಧ್ಯಕ್ಷತೆ ವಹಿಸಿದ್ದ ಎ.ಬಿ. ದೇಸಾಯಿ ಮಾತನಾಡಿ, ಕ್ಷೇತ್ರ ಯಾವುದಾದರೂ ಇರಲಿ, ಮೊದಲು ಅಲ್ಲ್ಲಿ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಮುಖ್ಯ. ದಿ. ಆರ್.ಬಿ. ಮಾಮಲೇದೇಸಾಯಿ ಅವರೊಬ್ಬ ತತ್ವನಿಷ್ಠ, ಕಾರ್ಯತತ್ಪರ, ನ್ಯಾಯ ನಿಷ್ಠುರಿಗಳಾಗಿದ್ದರು. ಸತ್ಯಶುದ್ಧ ಕಾಯಕ ಜೀವಿಗಳಾಗಿದ್ದರು ಎಂದು ಹೇಳಿದರು.
ಮಹೇಶ ಮಾಮಲೇದೇಸಾಯಿ ದತ್ತಿ ಆಶಯದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಹಂದಿಗನೂರ ದೇಶಗತಿ ಅರವಿಂದ ಮಾಮಲೇದೇಸಾಯಿ, ಯಶೋಧಾಬಾಯಿ ದೇಸಾಯಿ, ಜಿ.ಕೆ. ವೆಂಕಟೇಶ, ಡಾ. ತೇಜಸ್ವಿ ಕಟ್ಟಿಮನಿ, ಶಂಕರ ಹಲಗತ್ತಿ, ಡಾ. ಮಲ್ಲಿಕಾರ್ಜುನ ಪಾಟೀಲ ಇದ್ದರು.
ಶಶಿಧರ ತೋಡಕರ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶ ತುರಮರಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಸಿ.ಎಸ್. ಪಾಟೀಲ, ಡಾ. ಡಿ.ಎಂ. ಹಿರೇಮಠ, ನಾಗರಾಜ ಗುರಿಕಾರ, ಎನ್.ಆರ್. ಬಾಳಿಕಾಯಿ, ದಾನಪ್ಪ ಕಬ್ಬೇರ, ಬಿ.ಎಲ್. ಶಿವಳ್ಳಿ, ಶಂಕರ ಬೆಟಗೇರಿ, ಬಿ.ಎಸ್. ಶಿರೋಳ, ಡಾ. ಎಸ್.ಆರ್. ರಾಮನಗೌಡರ, ಡಾ. ಪಾರ್ವತಿ ಮತ್ತು ಸುರೇಶ ಹಾಲಭಾವಿ, ಬಿ.ಡಿ. ಹಿರೇಮಠ, ಪ್ರತಾಪ ಚವ್ಹಾಣ, ಎಸ್.ಜಿ. ಪಾಟೀಲ, ಚನಬಸಪ್ಪ ಮರದ, ಡಾ. ಲಿಂಗರಾಜ ಅಂಗಡಿ, ಎಂ.ಎಂ. ಚಿಕ್ಕಮಠ, ಬಸವರಾಜ ಕಪಲಿ, ಆಯ್.ಎಲ್. ಪಾಟೀಲ, ತೆಲಸಂಗ ಹಾಗೂ ಮಾಮಲೇದೇಸಾಯಿ ಕುಟುಂಬಸ್ಥರಾದ ದರ್ಶನ, ವಿಜಯ, ಉಮೇಶ, ಇಂದಿರಾ, ಶೀಲಾ, ಶ್ರೀನಿವಾಸ (ರಾಜು) ಕುಲಕರ್ಣಿ ಸೇರಿದಂತೆ ಮಾಮಲೇದೇಸಾಯಿ ಅಭಿಮಾನಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
ದಿ. ಆರ್.ಬಿ. ಮಾಮಲೇದೇಸಾಯಿಯವರ ಜೊತೆ ನನಗೆ ಭಾವನಾತ್ಮಕ ಸಂಬಂಧವಿತ್ತು. ಅವರು ರೈತರ ಬಗ್ಗೆ ಅಪಾರ ಕಳಕಳಿಯುಳ್ಳವರಾಗಿದ್ದರು. ಅಂದಿನ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರು ಮಧ್ಯವರ್ತಿಗಳ ಹಾವಳಿಯಿಂದಲ್ಲದೇ ವಿವಿಧ ರೀತಿಯಲ್ಲಿ ಶೋಷಣೆಗೆ ಒಳಪಡುವುದನ್ನು ನಿಯಂತ್ರಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭಿಸಲು ಶ್ರಮವಹಿಸಿದ ಕೀರ್ತಿ ಆರ್.ಬಿ. ಮಾಮಲೇದೇಸಾಯಿ ಅವರಿಗೆ ಸಲ್ಲಬೇಕು ಎಂದು ಸಚಿವ ಎಚ್.ಕೆ. ಪಾಟೀಲ ನುಡಿದರು.



