ಹಲ್ಲಿಗಳ ಕಾಟ ಇಲ್ಲದ ಮನೆಗಳೇ ವಿರಳ. ಮನೆಯ ಗೋಡೆಗಳು ಹಾಗೂ ಮೂಲೆಗಳಲ್ಲಿ ಹಲ್ಲಿಗಳ ಓಡಾಟ ಸಾಮಾನ್ಯ. ಅನೇಕರು ಈ ಪುಟ್ಟ ಜೀವಿಗಳನ್ನು ಕಂಡ ಕೂಡಲೇ ಭಯಪಟ್ಟು ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ.
ಆದರೆ ವಾಸ್ತವದಲ್ಲಿ ಹಲ್ಲಿಗಳಿಂದ ಭಯಪಡುವ ಅಗತ್ಯವಿಲ್ಲ. ಅವು ಮನೆಯಲ್ಲಿ ಇದ್ದರೆ ಮನೆ ಸ್ವಚ್ಛವಾಗಿರಲು ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುತ್ತವೆ. ಹೌದು, ಹಲ್ಲಿಗಳು ಮನೆಯೊಳಗೆ ಇದ್ದರೆ ಹಲವು ಪ್ರಯೋಜನಗಳಿವೆ. ಅವು ಯಾವುವು ಎಂಬುದನ್ನು ಈಗ ನೋಡೋಣ.
ಕೀಟ ನಿಯಂತ್ರಣದಲ್ಲಿ ಸಹಾಯಕ
ಹಲ್ಲಿಗಳು ನೊಣ, ಜಿರಳೆ, ಜೇಡ ಸೇರಿದಂತೆ ಹಲವಾರು ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ. ಇದರಿಂದ ಮನೆಯಲ್ಲಿ ಕೀಟಗಳ ಸಂಖ್ಯೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಹಲ್ಲಿಗಳಿರುವುದರಿಂದ ಕೀಟನಾಶಕ ಸ್ಪ್ರೇಗಳನ್ನು ಬಳಸುವ ಅವಶ್ಯಕತೆ ಕಡಿಮೆಯಾಗುತ್ತದೆ. ಕೀಟನಾಶಕಗಳ ಬಳಕೆ ಗಾಳಿಯನ್ನು ಕಲುಷಿತಗೊಳಿಸುವುದಲ್ಲದೆ, ಸಸ್ಯಗಳು ಹಾಗೂ ಜೇನುನೊಣಗಳಂತಹ ಪ್ರಯೋಜನಕಾರಿ ಕೀಟಗಳಿಗೆ ಹಾನಿಯುಂಟುಮಾಡಬಹುದು. ಹಲ್ಲಿಗಳು ಈ ಹಾನಿಯನ್ನು ತಪ್ಪಿಸುವಲ್ಲಿ ಸಹಾಯಕವಾಗುತ್ತವೆ.
ಮನೆಯ ವಾತಾವರಣ ಆರೋಗ್ಯಕರ ಎಂಬ ಸೂಚನೆ
ಮನೆಯಲ್ಲಿ ಹಲ್ಲಿಗಳಿರುವುದು ಮನೆಯ ಪರಿಸರ ಸಮತೋಲನದಲ್ಲಿದ್ದು ಆರೋಗ್ಯಕರವಾಗಿದೆ ಎಂಬುದಕ್ಕೆ ಒಂದು ಸೂಚನೆ. ಅವು ನೈಸರ್ಗಿಕ ಕೀಟ ನಿಯಂತ್ರಕರಾಗಿ ಕಾರ್ಯನಿರ್ವಹಿಸಿ, ಮನೆಯೊಳಗೆ ಅನಗತ್ಯ ಕೀಟಗಳು ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ. ಆದರೆ ಅವು ಆಹಾರ ಪದಾರ್ಥಗಳ ಹತ್ತಿರ ಬರದಂತೆ ಸ್ವಚ್ಛತೆಗೆ ಗಮನ ಕೊಡುವುದು ಅಗತ್ಯ.
ಸೊಳ್ಳೆಗಳ ಕಾಟದಿಂದ ರಕ್ಷಣೆ
ಹಲ್ಲಿಗಳು ಸೊಳ್ಳೆಗಳನ್ನು ಬೇಟೆಯಾಡುವಲ್ಲಿ ಬಹಳ ಪರಿಣಾಮಕಾರಿ. ರೋಗಗಳನ್ನು ಹರಡುವ ಸೊಳ್ಳೆಗಳನ್ನು ತಿನ್ನುವ ಮೂಲಕ, ಅವು ನಿಮ್ಮ ಮನೆಯ ಆರೋಗ್ಯವನ್ನು ಕಾಪಾಡುತ್ತವೆ. ಒಟ್ಟಾರೆ, ಹಲ್ಲಿಗಳು ಮನೆಯಲ್ಲಿ ಇದ್ದರೆ ಕೀಟ, ನೊಣ ಹಾಗೂ ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗುತ್ತದೆ. ಜೊತೆಗೆ ಮನೆಯ ವಾತಾವರಣವನ್ನು ಸ್ವಚ್ಛ, ಸುರಕ್ಷಿತ ಮತ್ತು ಆರಾಮದಾಯಕವಾಗಿಡಲು ಸಹಕಾರಿಯಾಗುತ್ತವೆ.



