ಹುಬ್ಬಳ್ಳಿ: ಬೀದಿ ನಾಯಿಗಳ ವಿಚಾರ ದೇಶದ ಸರ್ವೋಚ್ಚ ನ್ಯಾಯಾಲಯದವರೆಗೂ ತಲುಪಿರುವ ನಡುವೆಯೇ, ಈಗ ಸಾಕು ನಾಯಿಯ ಕಾಟ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ವರದಿಯಾಗಿದೆ. ನಗರದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಗುರುದೇವ ನಗರ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಗುರುದೇವ ನಗರ ನಿವಾಸಿ ಪರಶುರಾಮ ಎಂಬವರು, ವಿಲ್ಸನ್ ಮತ್ತು ವೈಷ್ಣವಿ ಎಂಬ ದಂಪತಿಯ ವಿರುದ್ಧ ಸಾಕು ನಾಯಿ ವಿಚಾರವಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆರೋಪಿಗಳು ಸಾಕಿರುವ ರಾಟ್ ವೀಲರ್ ನಾಯಿ ಮದನ ಎಂಬ ಬಾಲಕನಿಗೆ ಕಚ್ಚಿದೆ ಎನ್ನಲಾಗಿದೆ.
ಈ ವೇಳೆ ಬಾಲಕನನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ ಪರಶುರಾಮ ಅವರ ಮೇಲೆಯೇ ವಿಲ್ಸನ್ ಮತ್ತು ವೈಷ್ಣವಿ ದಂಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ‘ನಮ್ಮ ನಾಯಿಗೆ ಹೊಡೆದಿದ್ದೀರಿ’ ಎಂದು ಆರೋಪಿಸಿ ವಿಲ್ಸನ್ ಪರಶುರಾಮ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಅವರ ಮನೆಗೆ ಬಂದು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಘಟನೆ ಜನವರಿ 14ರಂದು ನಡೆದಿದ್ದು, ಅದೇ ದಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಕು ನಾಯಿಗಳ ಅಟ್ಟಹಾಸದಿಂದ ಗುರುದೇವ ನಗರ ನಿವಾಸಿಗಳು ಕಂಗಾಲಾಗಿದ್ದು, ಈ ಹಿಂದೆ ಕೂಡ ಸಾಕು ನಾಯಿಯಿಂದ ತೊಂದರೆ ಎದುರಿಸಿದ್ದೇವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಶುರಾಮ ಆಗ್ರಹಿಸಿದ್ದಾರೆ.
ದೂರು ಸ್ವೀಕರಿಸಿರುವ ಅಶೋಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದಾಖಲೆಗಳು ಹಾಗೂ ವೈದ್ಯಕೀಯ ವರದಿಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.



