ಲಕ್ಕುಂಡಿ: ಭಾರತ ಕಂಡ ಮಹಾನ್ ಆಧ್ಯಾತ್ಮಿಕ ಚಿಂತಕ ಹಾಗೂ ಯುವಶಕ್ತಿಗೆ ಪ್ರೇರಣೆಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ ಎಂದು ಹಿರಿಯ ಶಿಕ್ಷಕ ಬಸವರಾಜ ಗರ್ಜಪ್ಪನವರ ಹೇಳಿದರು.
ಇಲ್ಲಿನ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1862ರ ಜನವರಿ 12ರಂದು ಕೊಲ್ಕತ್ತಾದಲ್ಲಿ ಜನಿಸಿದ ಸ್ವಾಮಿ ವಿವೇಕಾನಂದರು ಬಾಲ್ಯದಲ್ಲೇ ರಾಮಾಯಣ, ಮಹಾಭಾರತದ ಕಥೆಗಳ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅರಿತುಕೊಂಡಿದ್ದರು. ದೈವಭಕ್ತಿ, ದೇಶಭಕ್ತಿ, ಆತ್ಮವಿಶ್ವಾಸ, ಧೈರ್ಯ ಮತ್ತು ದೃಢ ಸಂಕಲ್ಪ ಅವರ ಜೀವನದ ಪ್ರಮುಖ ಗುಣಗಳು ಆಗಿವೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಇಂದಿಗೂ ಯುವಜನತೆಗೆ ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಗುರುಮಾತೆ ಆರ್.ಬಿ. ಬರದ್ವಾಡ, ಆರ್.ಎಂ. ದಂಡಿನ, ಪಿ.ಬಿ. ಬರದ್ವಾಡ, ಅರ್ಜುನ ಚಲವಾದಿ, ಎ.ಎಂ. ದಂಡಿನ, ಅಂಬುಜಾ ಕುಲಕರ್ಣಿ ಉಪಸ್ಥಿತರಿದ್ದರು.



