ಬೆಂಗಳೂರು: ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡನಿಂದ ಧಮ್ಕಿ ಹಾಕಿದ ಆರೋಪದ ಪ್ರಕರಣದಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಯ ವಿರುದ್ಧ ಕಾಂಗ್ರೆಸ್ ಮುಖಂಡ ತುಚ್ಚವಾಗಿ ಮಾತನಾಡಿದ್ದಾರೆ. ಇದು ಖಂಡನೀಯ. ಆದರೆ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಮೌನ ವಹಿಸಿದೆ” ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ತಂದಿರುವ ದ್ವೇಷ ಭಾಷಣ ಮಸೂದೆ ಕುರಿತು ತೀವ್ರ ಟೀಕೆ ನಡೆಸಿದ ನಿಖಿಲ್, “ಈ ಬಿಲ್ ಕಾಂಗ್ರೆಸ್ ಮುಖಂಡರಿಗೆ ಅನ್ವಯವಾಗುವುದಿಲ್ಲ. ಇದು ವಿಪಕ್ಷಗಳು ಮತ್ತು ಮಾಧ್ಯಮಗಳ ಧ್ವನಿ ಕಟ್ಟಿಹಾಕಲು ಮಾತ್ರ ಬಳಕೆಯಾಗುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ಮೌನಗೊಳಿಸುವುದೇ ಇದರ ಉದ್ದೇಶ” ಎಂದು ಕಿಡಿಕಾರಿದರು.
ಶಿಡ್ಲಘಟ್ಟ ಪ್ರಕರಣದ ಮೊದಲ ದಿನವೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಹಿಳಾ ಅಧಿಕಾರಿಗೆ ಕರೆ ಮಾಡಿ ಧೈರ್ಯ ತುಂಬಿದ ವಿಚಾರವನ್ನು ಸ್ಮರಿಸಿದ ನಿಖಿಲ್, “ಈ ಸರ್ಕಾರಕ್ಕೆ ಹೆಣ್ಣುಮಕ್ಕಳಿಗೆ ಕಿಂಚಿತ್ತಾದರೂ ಗೌರವ ಇದ್ದರೆ, ದಯಾ-ದಾಕ್ಷಿಣ್ಯವಿಲ್ಲದೆ ಸಂಬಂಧಿಸಿದ ಕಾಂಗ್ರೆಸ್ ಮುಖಂಡನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.



