ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಚುರುಕುಗೊಂಡಿದ್ದು, ಗ್ರಾಮವನ್ನು ತಕ್ಷಣ ಸ್ಥಳಾಂತರಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ಪಷ್ಟಪಡಿಸಿದ್ದಾರೆ. ಆದರೆ ಉತ್ಖನನ ವೇಳೆ ಅತ್ಯಂತ ಮಹತ್ವದ ಅವಶೇಷಗಳು ಪತ್ತೆಯಾದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ.
ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ 10 ಮೀಟರ್ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಉತ್ಖನನ ನಡೆಯುತ್ತಿದ್ದು, ಪುರಾತತ್ವ ಇಲಾಖೆಯ ಶಿಫಾರಸ್ಸಿನ ಮೇರೆಗೆ ಈ ಪ್ರದೇಶವನ್ನು ಸೂಕ್ಷ್ಮ ವಲಯವೆಂದು ಘೋಷಿಸಲಾಗಿದೆ. ಇದರ ಪರಿಣಾಮವಾಗಿ ಸಾರ್ವಜನಿಕ ಪ್ರವೇಶ, ವೀಡಿಯೋ ಹಾಗೂ ಫೋಟೋಗ್ರಫಿಗೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ವಿಧಿಸಿದೆ.
ಉತ್ಖನನ ಕಾರ್ಯಕ್ಕೆ 5,338 ಚದರ ಮೀಟರ್ ಪ್ರದೇಶವನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಮುಂದಿನ 3 ರಿಂದ 4 ತಿಂಗಳ ಕಾಲ ನಿರಂತರ ಉತ್ಖನನ ನಡೆಯಲಿದೆ. ಮೊದಲ ದಿನ ಒಂದು ಅಡಿ ಆಳಕ್ಕೆ ಅಗೆದು ಕೆಲಸ ಆರಂಭವಾಗಿದ್ದು, ಇದೀಗ ಎರಡನೇ ದಿನದ ಕಾರ್ಯ ಮುಂದುವರೆದಿದೆ.
2003ರಲ್ಲಿ ನಡೆದ ಉತ್ಖನನದ ಬಳಿಕ ಇದೀಗ 22 ವರ್ಷಗಳ ನಂತರ ಮತ್ತೆ ಕಾರ್ಯ ಆರಂಭವಾಗಿದ್ದು, ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಹಿನ್ನೆಲೆ ಈ ಉತ್ಖನನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ. ವಜ್ರ, ವೈಢೂರ್ಯ, ಬಂಗಾರ ಸೇರಿದಂತೆ ಅಮೂಲ್ಯ ವಸ್ತುಗಳು ಪತ್ತೆಯಾಗುವ ಸಾಧ್ಯತೆ ಇದ್ದು, ಗ್ರಾಮದಲ್ಲಿ ಕುತೂಹಲ ಹಾಗೂ ಚರ್ಚೆ ತೀವ್ರಗೊಂಡಿದೆ.



