ಬೆಂಗಳೂರು: ಇನ್ನೇನು ಬೆಂಗಳೂರಿನ ವಾಯು ಗುಣಮಟ್ಟ ಸುಧಾರಿಸಿತೆನ್ನುವಷ್ಟರಲ್ಲಿ ಮತ್ತೆ ಕಳಪೆ ಹಂತಕ್ಕೆ ತಲುಪಿದೆ. ಕೆಲ ತಿಂಗಳ ಹಿಂದೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ ಇಂಡೆಕ್ಸ್ (AQI), ಹಂತ ಹಂತವಾಗಿ 130ರ ಆಸುಪಾಸಿಗೆ ಇಳಿದಿತ್ತು. ಆದರೆ ಇಂದಿನ ಅಂಕಿಅಂಶಗಳನ್ನು ನೋಡಿದರೆ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಮತ್ತೆ ವಾಯುಮಾಲಿನ್ಯಕ್ಕೆ ತುತ್ತಾಗಿರುವುದು ಸ್ಪಷ್ಟವಾಗಿದೆ.
ಬೆಂಗಳೂರಿನ ಗಾಳಿಯ ಗುಣಮಟ್ಟ 190ಕ್ಕೆ ತಲುಪಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ. ಇತ್ತೀಚೆಗೆ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದರೂ, ಇನ್ನೂ ವಾಯು ಗುಣಮಟ್ಟ ಅನಾರೋಗ್ಯಕರ ಹಂತದಲ್ಲಿಯೇ ಇದೆ. ಇದೇ ಪರಿಸ್ಥಿತಿ ಮುಂದುವರೆದರೆ, ಬೆಂಗಳೂರಿನ ಸ್ಥಿತಿ ದೆಹಲಿಯಂತಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಸೂಕ್ಷ್ಮ ಕಣಗಳಿಂದ ಶ್ವಾಸಕೋಶ ಸಮಸ್ಯೆ
ನಗರದಲ್ಲಿ PM2.5 ಮಟ್ಟ 111 ಹಾಗೂ PM10 ಮಟ್ಟ 141ಕ್ಕೆ ಏರಿಕೆಯಾಗಿದೆ. ಈ ಎರಡೂ ಪ್ರಮಾಣಗಳು ಸುರಕ್ಷಿತ ಮಿತಿಯನ್ನು ಮೀರಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮಟ್ಟದಲ್ಲಿವೆ. ವಿಶೇಷವಾಗಿ PM2.5 ಅತಿ ಸೂಕ್ಷ್ಮ ಕಣಗಳು ಶ್ವಾಸಕೋಶದ ಆಳಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆ, ಅಸ್ತಮಾ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ವಾಹನಗಳ ಅತಿಯಾದ ಬಳಕೆ, ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ಧೂಳು, ಕೈಗಾರಿಕಾ ಉತ್ಸರ್ಜನೆ ಹಾಗೂ ಗಾಳಿಯ ಚಲನೆಯ ಕೊರತೆ ವಾಯುಮಾಲಿನ್ಯ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಾಲಿನ್ಯ ಪ್ರಮಾಣ ಇನ್ನಷ್ಟು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
PM10 ಕಣಗಳು ಮಾನವನ ಕೂದಲಿಗಿಂತ ಸುಮಾರು 7 ಪಟ್ಟು ತೆಳುವಾಗಿದ್ದು, PM2.5 ಕಣಗಳು ಕೂದಲಿನ ದಪ್ಪದ ಕೇವಲ ಶೇ.3ರಷ್ಟು ಮಾತ್ರ ಇರುತ್ತವೆ. ಈ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶಕ್ಕೆ ಪ್ರವೇಶಿಸಿ ರಕ್ತದಲ್ಲೂ ಸೇರಬಹುದು. ಇದರಿಂದ ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಹೊರಗೆ ಹೋಗುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಬಳಕೆ, ವಾಹನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ನಗರಕ್ಕೆ ಈಗ ಅನಿವಾರ್ಯವಾಗಿದೆ.
ರಾಜ್ಯದ ಪ್ರಮುಖ ನಗರಗಳ ಇಂದಿನ AQI
ಬೆಂಗಳೂರು – 190
ಮಂಗಳೂರು – 164
ಮೈಸೂರು – 96
ಬೆಳಗಾವಿ – 122
ಕಲಬುರಗಿ – 79
ಶಿವಮೊಗ್ಗ – 176
ಬಳ್ಳಾರಿ – 196
ಹುಬ್ಬಳ್ಳಿ – 116
ಉಡುಪಿ – 158
ವಿಜಯಪುರ – 66
ಗಾಳಿಯ ಗುಣಮಟ್ಟದ ಅಳತೆ
ಉತ್ತಮ – 0–50
ಮಧ್ಯಮ – 50–100
ಕಳಪೆ – 100–150
ಅನಾರೋಗ್ಯಕರ – 150–200
ಗಂಭೀರ – 200–300
ಅಪಾಯಕಾರಿ – 300–500+



