ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಚಮತ್ಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕತ್ತಲಾಗುತ್ತಿದ್ದಂತೆ ಗ್ರಾಮದೆಲ್ಲೆಡೆ ನಿಗೂಢವಾಗಿ ಗೆಜ್ಜೆ ಶಬ್ದ ಕೇಳಿಸುತ್ತಿದ್ದು, ಇದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಕಳೆದ ಎರಡು ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಇಡೀ ಗ್ರಾಮಕ್ಕೆ ಕೇಳಿಸುತ್ತಿರುವ ಗೆಜ್ಜೆ ಶಬ್ದವು ಜನರ ನಿದ್ದೆಗೆಡಿಸಿದೆ. ವಿಶೇಷವಾಗಿ ದೇವಿಯ ಮೂರ್ತಿ ಇಟ್ಟಿರುವ ಸ್ಥಳದಿಂದಲೇ ಈ ಶಬ್ದ ಬರುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಇದ್ದ ದುರ್ಗಮ್ಮ ದೇವಿಯ ಮೂರ್ತಿ ಭಗ್ನಗೊಂಡಿತ್ತು. ಇದರಿಂದಾಗಿ ಗ್ರಾಮಸ್ಥರು ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದರು. ಮೂರ್ತಿಯನ್ನು ಸಿದ್ಧಪಡಿಸಿ, ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಇಟ್ಟುಕೊಳ್ಳಲಾಗಿತ್ತು. ಮೂರ್ತಿಗೆ ಬಣ್ಣ ಹಚ್ಚುವುದು ಮಾತ್ರ ಬಾಕಿಯಿದ್ದು, ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡುವ ತಯಾರಿ ನಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ವಿಚಿತ್ರವಾಗಿ ಕೇಳಿ ಬರುತ್ತಿರುವ ಗೆಜ್ಜೆ ಶಬ್ದವನ್ನು ದೈವದ ಲೀಲೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಇದು ದೇವಿಯ ಗೆಜ್ಜೆ ಶಬ್ದ ಎಂದು ಹೇಳಿಕೊಳ್ಳುತ್ತಿರುವ ಗ್ರಾಮಸ್ಥರು ಭಯ ಮತ್ತು ಭಕ್ತಿಭಾವ ಎರಡನ್ನೂ ಅನುಭವಿಸುತ್ತಿದ್ದಾರೆ. ರಾತ್ರಿಯಾದರೆ ಸಾಕು, ಇಡೀ ಗ್ರಾಮದಲ್ಲಿ ಗೆಜ್ಜೆ ಶಬ್ದ ಪ್ರತಿಧ್ವನಿಸುತ್ತಿದ್ದು, ಇದು ಜನರ ನಿದ್ದೆಗೆಡಿಸಿದೆ.



