ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟರಾಜ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು.
ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನ ಗೆದ್ದಿರುವ ಗಿಲ್ಲಿಗೆ ಇನ್ನಷ್ಟು ಕೀರ್ತಿ ಮತ್ತು ಯಶಸ್ಸು ದೊರೆಯಲಿ ಎಂದು ಅವರು ಶುಭ ಹಾರೈಸಿದ್ದಾರೆ. ಜೊತೆಗೆ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ಅಪ್ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನೂ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟರಾಜ್ ವಿಜೇತರಾಗಿದ್ದು, ರಕ್ಷಿತಾ ಶೆಟ್ಟಿ ರನ್ನರ್ಅಪ್ ಹಾಗೂ ಅಶ್ವಿನಿ ಗೌಡ ಎರಡನೇ ರನ್ನರ್ಅಪ್ ಆಗಿದ್ದಾರೆ. ವಿನ್ನರ್ ಆಗಿರುವ ಗಿಲ್ಲಿಗೆ 50 ಲಕ್ಷ ರೂ. ನಗದು ಬಹುಮಾನ, ಕಾರು ಹಾಗೂ ನಟ ಕಿಚ್ಚ ಸುದೀಪ್ ಅವರ ಕಡೆಯಿಂದ 10 ಲಕ್ಷ ರೂ. ಬಹುಮಾನ ದೊರೆತಿದೆ. ಗಿಲ್ಲಿ ನಟರಾಜ್ ಗೆಲುವಿನ ಸುದ್ದಿ ಹೊರಬೀಳುತ್ತಿದ್ದಂತೆಯೇ ತವರೂರಾದ ಮಳವಳ್ಳಿಯಲ್ಲಿ ಸಂಭ್ರಮಾಚರಣೆ ಜೋರಾಗಿದ್ದು, ಅಭಿಮಾನಿಗಳು ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಗಿಲ್ಲಿ ನಟನಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.



