
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶುಕ್ರವಾರ ತೆರೆ ಕಂಡಿದ್ದ ಭಜರಂಗಿ-2 ಪ್ರದರ್ಶನವು ಪುನೀತ್ ಅಗಲಿಕೆಯಿಂದ ರದ್ದಾಗಿದೆ.
ಭಜರಂಗಿ-2 ನೋಡಲು ಗುರುವಾರ ರಾತ್ರಿಯಿಂದಲೇ ಚಿತ್ರಮಂದಿರವನ್ನು ಶೃಂಗರಿಸಿದ್ದ ಶಿವಣ್ಣ ಹಾಗೂ ಪುನೀತ್ ಅಭಿಮಾನಿಗಳು ಬೆಳಗಿನ ಪ್ರದರ್ಶನವನ್ನು ಬೇಗನೇ ಆರಂಭಿಸುವಂತೆ ಮಾಲಕರಿಗೆ ಮನವಿ ಮಾಡಿದ್ದರು. ಕ್ರೌಡ್ ಹೆಚ್ಚಾಗಿದ್ದರಿಂದ ಬೆಳಗ್ಗೆ 10 ಗಂಟೆ ಸುಮಾರಿಗೆ ಭಜರಂಗಿ ಪ್ರದರ್ಶನ ಆರಂಭಗೊಂಡಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೊದಲ ಪ್ರದರ್ಶನ ಯಶಸ್ವಿಯಾಗಿದ್ದೇನೊ ನಿಜ, ಆದರೆ ಅಷ್ಟೊತ್ತಿಗೆ ಪುನೀತ್ ರಾಜ್‌ಕುಮಾರ್ ಸ್ಥಿತಿ ಗಂಭೀರ ಎನ್ನುವ ಸುದ್ದಿ ಆತಂಕ ಸೃಷ್ಟಿಸಿತ್ತು. ಆತಂಕದ ನಡುವೆಯೇ ಎರಡು ಪ್ರದರ್ಶನ ಕಂಡ ಭಜರಂಗಿ ಮೂರನೇ ಪ್ರದರ್ಶನದ ವೇಳೆಗೆ ಆಘಾತದ ಸುದ್ದಿ ಅಧಿಕೃತವಾಗಿ ಹೊರಬಿತ್ತು. ಪರಿಣಾಮ ಭಜರಂಗಿ ತನ್ನ ಓಟ ನಿಲ್ಲಿಸಿದ. ಚಿತ್ರಮಂದಿರದ ಮಾಲಕರು ರಾಜ್ಯಾದ್ಯಂತ ಪ್ರದರ್ಶನ ಸ್ಥಗಿತಗೊಳಿಸುವ ಮೂಲಕ ಪುನೀತ್ ನೆನೆದು ಭಾವುಕರಾದರು.