ಬೆಂಗಳೂರು: ನೂರಕ್ಕೆ ನೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಸಚಿವ ಬೋಸರಾಜು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಅವರು ಹೇಳಿದ್ದಾರೆ.
ವಿಕಾಸಸೌಧದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬೋಸರಾಜು, ಇದು ಮುಗಿದ ಅಧ್ಯಾಯ ಅಂತಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಪ್ರಸ್ತುತ ಯಾವುದೇ ನಾಯಕತ್ವ ಬದಲಾವಣೆಯ ಪರಿಸ್ಥಿತಿ ಇಲ್ಲ. ಮುಂದೆ ಅಂತಹ ಸಂದರ್ಭ ಬಂದರೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಬಿಜೆಪಿಯವರು ಬೆಳಿಗ್ಗೆಯಿಂದ ಸಂಜೆ ತನಕ ಸುಳ್ಳು ಆರೋಪ ಮಾಡುತ್ತಿದ್ದಾರೆ. ಲೋಪದೋಷಗಳಿದ್ದರೆ ಸ್ಪಷ್ಟವಾಗಿ ಹೇಳಲಿ. ಸುಮ್ಮನೆ ಬೊಬ್ಬೆ ಹೊಡೆಯುವುದರಲ್ಲಿ ಅರ್ಥವಿಲ್ಲ. ಹೊಸದಾಗಿ ಆಯ್ಕೆಯಾದ ಕೆಲ ಶಾಸಕರು ಉತ್ಸಾಹದಲ್ಲಿ ಹೇಳಿಕೆ ನೀಡಿರಬಹುದು. ಆದರೆ ನೂರಕ್ಕೆ ನೂರು ಪರ್ಸೆಂಟ್ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಬೋಸರಾಜು ಪುನರುಚ್ಚರಿಸಿದರು.
ಬಿಜೆಪಿಯವರು ಪಾದಯಾತ್ರೆ ಮಾಡುವುದಕ್ಕೂ ತಮ್ಮ ಹೈಕಮಾಂಡ್ ಅನುಮತಿ ಪಡೆಯಬೇಕು. ಪಾದಯಾತ್ರೆಗೆ ಮ್ಯಾಪ್ ಕೂಡ ತಯಾರಿಸಿದ್ದರೂ ಅದು ನಡೆಯಲಿಲ್ಲ. ನಮ್ಮ ಹೈಕಮಾಂಡ್ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದರು.
ಸಿಎಂ ಬದಲಾಗುತ್ತಾರೆ ಎಂದು ವಿಜಯೇಂದ್ರ ನೂರಾರು ಬಾರಿ ಹೇಳಿದ್ದಾರೆ. ಅದರಿಂದ ಏನಾದರೂ ಆಯಿತಾ? ವಿಜಯೇಂದ್ರ ಕೇವಲ ಬಂಡಲ್ ಹೊಡೆಯುತ್ತಿದ್ದಾರೆ. ಅವರನ್ನೊಬ್ಬ ‘ಇಮ್ಯಾಚ್ಯುರ್ಡ್ ಅಧ್ಯಕ್ಷ’ ಎಂದು ಕಿಡಿಕಾರಿದರು.



