ದೇವನಹಳ್ಳಿ:- ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಹಾಕಿದ ಪ್ರಯಾಣಿಕನೋರ್ವನನ್ನು ಬಂಧಿಸಲಾಗಿದೆ.
ಅಬು ಅಕಿಲ್ ಅಜರ್ ಚಾದ್ ಬಂಧಿತ ಆರೋಪಿ. ಬೆಂಗಳೂರಿನಿಂದ ಅಹಮದಾಬಾದ್ಗೆ ತೆರಳಲು ಆಗಮಿಸಿದ್ದ ಅಬು ಅಕಿಲ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶದ ವೇಳೆ ತಪಾಸಣೆಗೆ ಒಳಗಾಗಿದ್ದ. ಈ ವೇಳೆ ಭದ್ರತಾ ನಿಯಮಾನುಸಾರ ಎರಡು ಹಂತಗಳಲ್ಲಿ ಬ್ಯಾಗ್ ಪರಿಶೀಲನೆ ನಡೆಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಅಬು ಅಕಿಲ್, ತನ್ನ ಬ್ಯಾಗ್ನಲ್ಲಿ ಎರಡು ಸಣ್ಣ ಬಾಂಬ್ಗಳಿವೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಬೆದರಿಕೆ ವಿಚಾರ ತಿಳಿದ ಕೂಡಲೇ ಎಚ್ಚೆತ್ತ ಏರ್ಪೋರ್ಟ್ ಭದ್ರತಾ ಸಿಬ್ಬಂದಿ, ಆರೋಪಿಯನ್ನು ತಕ್ಷಣ ವಶಕ್ಕೆ ಪಡೆದು, ಬ್ಯಾಗ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಪರಿಶೀಲನೆಯಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಆದರೂ ಬಾಂಬ್ ಬೆದರಿಕೆ ಹಾಕಿದ ಕಾರಣ ಆರೋಪಿಯನ್ನು ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಈ ಸಂಬಂಧ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಇಂತಹ ಬೆದರಿಕೆಗಳನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.



