ನವದೆಹಲಿ: ಕೇಂದ್ರ ಬಜೆಟ್ 2026ರ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಸತತ ಏರಿಕೆಯ ಬಳಿಕ, ಚಿನ್ನ ಹಾಗೂ ಬೆಳ್ಳಿ ದರಗಳು ಸತತ ಎರಡನೇ ದಿನವೂ ತೀವ್ರ ಕುಸಿತ ದಾಖಲಿಸಿವೆ.
ಚಿನ್ನದ ಬೆಲೆ 10 ಗ್ರಾಂಗೆ ₹8,620 ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ ₹45,000 ಕುಸಿತ ಕಂಡಿದೆ. ಇದರಿಂದಾಗಿ ಕೇವಲ ಎರಡು ದಿನಗಳಲ್ಲಿ ಚಿನ್ನದ ದರದಲ್ಲಿ ಒಟ್ಟು ₹18,000 ಮತ್ತು ಬೆಳ್ಳಿಯಲ್ಲಿ ₹60,000ರಷ್ಟು ಇಳಿಕೆ ದಾಖಲಾಗಿದೆ.
ಬೆಂಗಳೂರಿನಲ್ಲಿ, 22 ಕ್ಯಾರಟ್ ಚಿನ್ನ 10 ಗ್ರಾಂಗೆ ₹7,900 ಕುಸಿದು ₹1,47,200ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನ 10 ಗ್ರಾಂಗೆ ₹8,620 ಇಳಿದು ₹1,60,580ಕ್ಕೆ ಇಳಿದಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ₹45,000ರ ಭಾರೀ ಕುಸಿತದೊಂದಿಗೆ ₹3.50 ಲಕ್ಷಕ್ಕೆ ಇಳಿದಿದೆ.
ದೆಹಲಿಯಲ್ಲಿ, 99.9 ಶುದ್ಧತೆಯ ಚಿನ್ನ 10 ಗ್ರಾಂಗೆ ₹3,500 ಕುಸಿದು ₹1,65,500ಕ್ಕೆ ತಲುಪಿದೆ. ಬೆಳ್ಳಿ ಬೆಲೆ ₹72,500 ಇಳಿಕೆಯೊಂದಿಗೆ ₹3.12 ಲಕ್ಷಕ್ಕೆ ಕುಸಿದಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಚಿನ್ನ ಮತ್ತು ಬೆಳ್ಳಿ ದರಗಳು ಇತ್ತೀಚೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭ ಹಿಂತೆಗೆದುಕೊಳ್ಳುತ್ತಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ, ಅಮೆರಿಕದ ಕೇಂದ್ರ ಬ್ಯಾಂಕ್‌ನ ನೂತನ ಮುಖ್ಯಸ್ಥರಾಗಿ ಹಣದುಬ್ಬರ ನಿಯಂತ್ರಣಕ್ಕೆ ಒಲವು ಹೊಂದಿರುವ ಕೆವಿನ್ ನೇಮಕ,
ಶಾರ್ಟ್‌ಸೆಲ್ಲರ್‌ಗಳಿಗೆ ಮಾರಾಟದ ಗಡುವು ಸಮೀಪಿಸಿರುವುದು ಹಾಗೂ ಬೆಳ್ಳಿಯ ಮೇಲೆ ಹಿಡಿತ ಕಡಿಮೆ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರುಕಟ್ಟೆಯಲ್ಲಿ ನಡೆಸುತ್ತಿರುವ ತಂತ್ರಗಳು ಕೂಡ ದರ ಕುಸಿತಕ್ಕೆ ಕಾರಣವಾಗಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.



